ರಾಮನಗರ : ನಾನು ಮಾಜಿ ಸಂಸದ ಡಿ.ಕೆ.ಸುರೇಶ್ ಪತ್ನಿ ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯೊಬ್ಬರು ಡಿಕೆ ಸುರೇಶ್ ಜೊತೆಗಿರುವ ರೀತಿ ಫೋಟೋ ಎಡಿಟ್ ಮಾಡಿ ಏ.8 ರಂದು ಫೇಸ್ ಬುಕ್, ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹರಿಬಿಟ್ಟಿದ್ದು, ನಾನು ಡಿ.ಕೆ.ಸುರೇಶ್ ಪತ್ನಿ ಎಂದು ಹೇಳಿಕೊಂಡಿದ್ಳು. ಈ ಸಂಬಂಧ ಡಿ.ಕೆ.ಸುರೇಶ್ ಪರ ವಕೀಲ ಪ್ರದೀಪ್ ದೂರು ನೀಡಿದ್ದು, ದೂರಿನ ಹಿನ್ನೆಲೆ ರಾಮನಗರ ಸೆನ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಅಲ್ಲದೇ ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ಗ್ರಾಮದ ಮಹಿಳೆ ಪವಿತ್ರ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಉಗ್ರರ ದಾಳಿಯಿಂದ ಬಚಾವ್ ಆದ ಹುಬ್ಬಳ್ಳಿಯ ಕುಟುಂಬ ; ಇಲ್ಲಿದೆ ರೋಚಕ ಕಥೆ
ಡಿಕೆ ಸುರೇಶ್ ಪರ ವಕೀಲರ ದೂರು ಏನು..?
ಮಹಿಳೆ ಡಿಕೆ ಸುರೇಶ್ ರವರ ಪತ್ನಿ ಎಂಬ ಸೋಗಿನಲ್ಲಿ ಅಪಪ್ರಚಾರ ಮಾಡುತ್ತಿದ್ದು, ಇದರಿಂದ ಸಾರ್ವಜನಿಕವಾಗಿ ತಪ್ಪು ಸಂದೇಶವನ್ನು ಹಬ್ಬಿಸುತ್ತಿದ್ದಾರೆ. ಸುಳ್ಳು ಮಾಹಿತಿಯನ್ನು ನಿಜವೆಂದು ಸಾರ್ವಜನಿಕರು ನಂಬುವಂತೆ ಕೇಡುಬಯಸುವ ದುರುದ್ದೇಶದಿಂದ ವಿಡಿಯೋವನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಳ್ಳಲಾಗಿದೆ. ಆದ್ದರಿಂದ ಮಹಿಳೆ ವಿರುದ್ಧ ಕಲಂ 319, 237, 336, 353 ಬಿ.ಎನ್.ಎಸ್ ಹಾಗೂ 66(ಡಿ) ಐ.ಟಿ ಆಕ್ಟ್ ಅಡಿಯಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ವಕೀಲ ಪ್ರದೀಪ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬಂಧಿತ ಮಹಿಳೆ ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ಗ್ರಾಮದವಳಾಗಿದ್ದು, ಮೈಸೂರಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಗಂಡನಿಂದ ವಿಚ್ಛೇದನ ಪಡೆದಿದ್ದ ಮಹಿಳೆ ಸದ್ಯ ಮೈಸೂರಿನಲ್ಲಿ ವಾಸವಿದ್ದಾರೆ. ಮೈಸೂರಿನಲ್ಲಿ ಸದ್ಯ ಮಹಿಳೆಯನ್ನ ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ.