ಬೆಂಗಳೂರು: ಕಾಂಗ್ರೆಸ್ ಅವಧಿಯಲ್ಲಿ ಜಾತಿ ಸಮೀಕ್ಷೆಯನ್ನು ಏಕೆ ಮಾಡಲಿಲ್ಲ ಎಂದು ತಿಳಿಸಲಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಸವಾಲೆಸೆದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದು ಜಾತಿ ಗಣತಿ ನಡೆಸಲು ತೀರ್ಮಾನಿಸಿದೆ. ಬ್ರಿಟಿಷರ ನಂತರ ನೆಹರು, ಇಂದಿರಾಗಾಂಧಿ, ರಾಜೀವ್ಗಾಂಧಿ ಪ್ರಧಾನಿಯಾದರೂ, ಕಾಂಗ್ರೆಸ್ ಜಾತಿ ಸಮೀಕ್ಷೆ ಮಾಡಲಿಲ್ಲ. ಕಾಂಗ್ರೆಸ್ಗೆ ಅಂತಹ ಸಾಮಾನ್ಯ ಜ್ಞಾನ ಕೂಡ ಇಲ್ಲ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಜಾತಿ ಗಣತಿ ಪ್ರಸ್ತಾಪವನ್ನು ತಿರಸ್ಕರಿಸಲಾಗಿತ್ತು ಎಂದರು.
2029 ಕ್ಕೆ ಮಹಿಳಾ ಮೀಸಲಾತಿ ತರಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದಕ್ಕೆ ಜನಗಣತಿ ಹಾಗೂ ಜಾತಿ ಸಮೀಕ್ಷೆ ನೆರವಾಗಲಿದೆ. ಇಂತಹ ಉತ್ತಮ ಕೆಲಸ ಮಾಡುತ್ತಿರುವ ಪ್ರಧಾನಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.
ಈಗ ಸಿಎಂ ಸಿದ್ದರಾಮಯ್ಯ ಬಿಜೆಪಿಯನ್ನು ಟೀಕೆ ಮಾಡುತ್ತಿದ್ದಾರೆ. 2015 ರಲ್ಲಿ ಜಾತಿ ಗಣತಿ ಮಾಡಿ ಹತ್ತು ವರ್ಷಗಳ ನಂತರ ಅದನ್ನು ಬಿಡುಗಡೆ ಮಾಡಲಾಯಿತು. ಈ ಬಗ್ಗೆ ಕಾಂಗ್ರೆಸ್ ಮೊದಲು ಯೋಚಿಸಬೇಕು. ದೇಶದಲ್ಲಿ ಜಾತಿ ಗಣತಿ ಮಾಡಲು ಆಗಿಲ್ಲವೆಂದು ಕಾಂಗ್ರೆಸ್ ಕ್ಷಮೆ ಕೋರಲಿ. ಯಾಕೆ ಮಾಡಿಲ್ಲವೆಂದು ಸಿಎಂ ಸಿದ್ದರಾಮಯ್ಯನವರೇ ತಿಳಿಸಲಿ ಎಂದು ಸವಾಲು ಹಾಕಿದರು.
ಊಟದ ಬಳಿಕ ಪಾತ್ರೆಗಳನ್ನು ತೊಳೆಯದೇ ಹಾಗೆ ಬಿಡ್ತೀರಾ!? ನೀವು ನೋಡಲೇಬೇಕಾದ ಸ್ಟೋರಿ!
ಜಾತಿ ಗಣತಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ. ರಾಜ್ಯ ಸರ್ಕಾರಕ್ಕೆ ಆ ಅಧಿಕಾರ ಇಲ್ಲ. 150 ಕೋಟಿ ರೂ. ಖರ್ಚಿನಲ್ಲಿ ಮಾಡಿದ ರಾಜ್ಯದ ಜಾತಿ ಗಣತಿ ವರದಿ ಏನಾಗಲಿದೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಈ ಸಮೀಕ್ಷೆಯ ವೇಳೆ ಯಾರೂ ಯಾರ ಮನೆಗೂ ಹೋಗಿಲ್ಲ ಎಂದು ಸ್ವಾಮೀಜಿಗಳೇ ಹೇಳುತ್ತಿದ್ದಾರೆ. ಈ ಸಮೀಕ್ಷೆಯ ಗತಿ ಏನು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಬೇಕು. ರಾಜ್ಯದ ಜಾತಿ ಗಣತಿ ವರದಿ ವಿರೋಧಿಸಿ ಎಲ್ಲ ಸಮುದಾಯಗಳು ಪ್ರತಿಭಟನೆ ಮಾಡುತ್ತಿವೆ. ಕೆಲವು ಸಮುದಾಯದವರು ತಾವೇ ಸ್ವತಃ ಹೊಸ ಸಮೀಕ್ಷೆ ಮಾಡುವುದಾಗಿ ಹೇಳಿದ್ದಾರೆ. ಸಚಿವರು ಕೂಡ ಇದನ್ನು ವಿರೋಧಿಸಿದ್ದಾರೆ. ಅಧಿಕಾರ ಕಳೆದುಕೊಳ್ಳುವ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ಈ ವರದಿಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದರು.
ಕೇಂದ್ರ ಸರ್ಕಾರ ನಡೆಸುವ ಸಮೀಕ್ಷೆಯನ್ನು ಚುನಾವಣಾ ಆಯೋಗ ಬಳಸಿಕೊಳ್ಳಲಿದೆ. ಆದರೆ ಈ ರಾಜ್ಯದ ವರದಿ ಕಸದ ಬುಟ್ಟಿ ಸೇರಲಿದೆ. ಇದು ಯಾವ ಪ್ರಯೋಜನಕ್ಕೂ ಇರುವುದಿಲ್ಲ. ಸಿದ್ದರಾಮಯ್ಯ ಮನೆಯಲ್ಲಿ ಕುಳಿತು ಬರೆಸಿದ ಈ ವರದಿ ಅಧಿಕೃತವಲ್ಲ ಎಂದರು.
ಬಸ್ ಚಾಲಕರೊಬ್ಬರು ಬಸ್ಸಿನಲ್ಲೇ ನಮಾಜ್ ಮಾಡಿದ್ದಾರೆ. ಬಸ್ಸು ಚಲಾಯಿಸುತ್ತಿರುವಾಗ ನಮಾಜ್ ಮಾಡಿದ್ದರೆ ಪ್ರಯಾಣಿಕರ ಗತಿ ಏನು? ಸಿಎಂ ಸಿದ್ದರಾಮಯ್ಯ ಮಾಡಿದ ಓಲೈಕೆ ರಾಜಕಾರಣದಿಂದ ಹೀಗಾಗಿದೆ. ಈ ಚಾಲಕನನ್ನು ಕೂಡಲೇ ಕೆಲಸದಿಂದ ವಜಾ ಮಾಡಬೇಕು. ಇತ್ತೀಚೆಗೆ ಮುಸ್ಲಿಮರ ಸಭೆಗೆ ಹೋದ ಸಿಎಂ ಸಿದ್ದರಾಮಯ್ಯ ಅಲ್ಲಿ ಕೂಡ ನಿಮ್ಮ ಜೊತೆಗೆ ಇದ್ದೇನೆ ಎಂದು ಹೇಳಿದ್ದಾರೆ. ಯುದ್ಧದ ವಿಚಾರದಲ್ಲಿ ಕೆಟ್ಟ ಹೇಳಿಕೆ ನೀಡಿದ ಅವರು ನಂತರ ಯೂಟರ್ನ್ ಹೊಡೆದಿದ್ದಾರೆ ಎಂದರು.
ಡಿ.ಕೆ.ಶಿವಕುಮಾರ್ ಕಾಂಗ್ರೆಸ್ಸೇ ಬೇರೆ. ಸಿದ್ದರಾಮಯ್ಯನವರ ಕಾಂಗ್ರೆಸ್ಸೇ ಬೇರೆ. ಕಾಂಗ್ರೆಸ್ ಎರಡಾಗಿ ವಿಭಜನೆಯಾಗಿದೆ. ಸಚಿವ ತಿಮ್ಮಾಪುರ, ಸಂತೋಷ್ ಲಾಡ್ ಎಲ್ಲರೂ ಪಾಕಿಸ್ತಾನದ ಮಾಧ್ಯಮಗಳಲ್ಲಿ ಹೆಸರು ಪಡೆದಿದ್ದಾರೆ. ಇವರಿಗೆ ರಾಜ್ಯದಲ್ಲಿ ಯಾವುದೇ ಹೆಸರಿಲ್ಲ ಎಂದು ಟೀಕಿಸಿದರು.