ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಎರಡು ರನ್ ಗಳಿಂದ ರೋಚಕವಾಗಿ ಗೆದ್ದು ಬೀಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಸಿಎಸ್‌ಕೆ ನಿಗದಿತ ಓವರ್‌ಗಳಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡು 211 ರನ್ ಗಳಿಸಲು ಶಕ್ತವಾಯಿತು. ಸಿಎಸ್‌ಕೆ ಪರ ಆಯುಷ್ ಮ್ಹಾತ್ರೆ 94 ಮತ್ತು ರವೀಂದ್ರ ಜಡೇಜಾ 77* ರನ್ ಗಳಿಸಿದರೆ, ಆರ್‌ಸಿಬಿ ಪರ ಲುಂಗಿ ಎನ್‌ಗಿಡಿ ಮೂರು ವಿಕೆಟ್ ಪಡೆದರೆ, ಕೃನಾಲ್ ಪಾಂಡ್ಯ ಮತ್ತು ಯಶ್ ದಯಾಳ್ ತಲಾ ಒಂದು ವಿಕೆಟ್ ಪಡೆದರು.
ರೋಚಕ ಪಂದ್ಯದಲ್ಲಿ ಬೆಂಗಳೂರು ತಂಡ ಚೆನ್ನೈ ತಂಡವನ್ನು ಸೋಲಿಸಿತು. ಕೊನೆಯ ಓವರ್‌ನಲ್ಲಿ ಚೆನ್ನೈಗೆ 15 ರನ್‌ಗಳು ಬೇಕಾಗಿದ್ದವು. ಆದರೆ ಯಶ್ ದಯಾಳ್ ಮೊದಲು ಧೋನಿಯನ್ನು ಔಟ್ ಮಾಡಿ ನಂತರ ಕೇವಲ 12 ರನ್ ನೀಡುವ ಮೂಲಕ ತಮ್ಮ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.
ಶನಿವಾರ ಬೆಂಗಳೂರಿನಲ್ಲಿ ನಡೆದ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಆಲ್‌ರೌಂಡರ್ ರೊಮಾರಿಯೋ ಶೆಫರ್ಡ್ ಅಬ್ಬರಿಸಿದರು. ರೊಮಾರಿಯೋ ಅಬ್ಬರಕ್ಕೆ ಹಲವು ದಾಖಲೆಗಳು ಪುಡಿಯಾದವು. ಆರ್ ಸಿಬಿ ಪರವಾಗಿ ವೇಗದ ಅರ್ಧಶತಕ ಬಾರಿಸಿದ ರೊಮಾರಿಯೋ ಶೆಫರ್ಡ್ ಬೃಹತ್ ಮೊತ್ತ ಕಲೆ ಹಾಕಲು ಪ್ರಮುಖ ಕೊಡುಗೆ ನೀಡಿದರು.
ಆರ್ ಸಿಬಿ 17.4 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿ ಸಂಕಷ್ಟದಲ್ಲಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ಗೆಲುವಿಗೆ ಬೃಹತ್ ಮೊತ್ತದ ಅವಶ್ಯಕತೆ ಇತ್ತು. 180 ರನ್ ಹೊಡೆದರೆ ಸಾಕು ಎನ್ನುವಾಗಲೆ, ಕೊನೆಯ 2.2 ಓವರ್ ಬಾಕಿ ಇದ್ದಾಗ ಕ್ರೀಸ್‌ಗೆ ಬಂದ ರೊಮಾರಿಯೋ ಶೆಫರ್ಡ್ ಸಿಎಸ್‌ಕೆ ಬೌಲರ್ ಗಳನ್ನು ತರಾಟೆಗೆ ತೆಗೆದುಕೊಂಡರು.
19ನೇ ಓವರ್ ನಲ್ಲಿ ಖಲೀಲ್ ಅಹ್ಮದ್‌ಗೆ 33 ರನ್ ಬಾರಿಸುವ ಮೂಲಕ ಅಬ್ಬರಿಸಿದರು. ಐಪಿಎಲ್ ಇತಿಹಾಸದಲ್ಲಿ ಒಂದೇ ಓವರ್ ನಲ್ಲಿ ನಾಲ್ಕನೇ ದುಬಾರಿ ಓವರ್ ಎನಿಸಿಕೊಂಡಿದೆ. ಕ್ರಿಸ್ ಗೇಲ್ ಆರ್ ಸಿಬಿ ಪರವಾಗಿ ಕೇರಳ ಟಸ್ಕರ್ಸ್ ವಿರುದ್ಧ ಒಂದೇ ಓವರ್ ನಲ್ಲಿ 37 ರನ್ ಬಾರಿಸಿದ್ದು ಈವರೆಗಿನ ದಾಖಲೆಯಾಗಿದೆ. ಈ ಆವೃತ್ತಿಯಲ್ಲಿ ಒಂದೇ ಓವರ್ ನಲ್ಲಿ ಹೆಚ್ಚು ರನ್ ಗಳಿಸಿದ ದಾಖಲೆಯಾಗಿದೆ.