ಕನ್ನಡ, ಕನ್ನಡ, ಕನ್ನಡ ಎಂದು ಕನ್ನಡಿಗರನ್ನು ಕೆರಳಿಸಿದ್ದ ಗಾಯಕ ಸೋನು ನಿಗಮ್ ನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಲಾಗಿದೆ. ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇಂದು ಬೆಂಗಳೂರಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಸಂಗೀತ ಸಂಯೋಜಕರ ಸಂಘ, ನಿರ್ದೇಶಕರ ಸಂಘ, ನಿರ್ಮಾಪಕರ ಸಂಘ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ನರಸಿಂಹಲು, ಸೋನು ನಿಗಮ್ ಕನ್ನಡಿಗರ ಬಗ್ಗೆ ಕೇವಲವಾಗಿ ಮಾತಾಡಿದ್ದಾರೆ. ಅವರು ಕ್ಷಮೆ ಕೇಳ್ತಾರೆ ಅಂತ ನಾವು ಭಾವಿಸಿದ್ದೋ. ಇದುವರೆಗೂ ಸೋನು ನಿಗಮ್ ಕ್ಷಮೆ ಕೇಳಿಲ್ಲ. ನಾವು ಈ ಕ್ಷಣದಿಂದಲೇ ಸೋನು ನಿಗಮ್ ಅವ್ರನ್ನ ಕನ್ನಡದ ಚಿತ್ರರಂಗದಿಂದ ದೂರ ಇಡುವ ಕೆಲಸ ಮಾಡ್ತಿವಿ. ನಾವು ಅವರಿಗೆ ಅಸಹಕಾರ ತೋರುವ ಮೂಲಕ ಚಿತ್ರರಂಗದಿಂದ ದೂರ ಇಡುತ್ತೇವೆ ಎಂದು ಹೇಳಿದರು.
ಸಂಗೀತ ನಿರ್ದೇಶಕ ಧರ್ಮವಿಶ್ ಮಾತನಾಡಿ, ಸಂಗೀತ ಸಂಯೋಜಕರ ಪ್ರತಿನಿಧಿಯಾಗಿ ನಾನು ಬಂದಿದ್ದೀನಿ. ನಾವು ಎಲ್ಲಾ ಸಂಗೀತ ನಿರ್ದೇಶಕರ ಜೊತೆ ಮಾತಾಡಿದ್ದೀವಿ. ನಾವೆಲ್ಲ ಅವ್ರಿಗೆ ಅಸಹಕಾರ ತೋರೊದಕ್ಕೆ ನಿರ್ಧಾರ ಮಾಡಿದ್ದೀವಿ. ನಾವು ಮಾತ್ರ ಅಲ್ಲ ಆಡಿಯೋ ಕಂಪನಿಗಳು ನಮಗೆ ಸಪೋರ್ಟ್ ಮಾಡಬೇಕು. ಸಂಗೀತ ನಿರ್ದೇಶಕರೆಲ್ಲ ಅಸಹಕಾರ ತೋರೊದಕ್ಕೆ ನಿರ್ಧಾರ ಮಾಡಿದ್ದೀವಿ ಎಂದು ಹೇಳಿದರು.
ಉಮೇಶ್ ಬಣಕಾರ್ ಮಾತನಾಡಿ, ಅಸಹಕಾರ ಅಂದ್ರೆ ಬ್ಯಾನ್ ಇದ್ದಂತೆಯೇ. ಇದೇ ವಾರ ಮತ್ತೊಂದು ಸಭೆ ಕರೆದು ಅಸಹಕಾರ ಎಷ್ಟು ಅವಧಿ ಅನ್ನೊಧ ಚರ್ಚೆ ಮಾಡ್ತೇವೆ ಎಂದರು.
ಏನಿದು ವಿವಾದ?
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಕನ್ನಡ ಹಾಡು ಹಾಡುವಂತೆ ಸೋನು ನಿಗಮ್ ಗೆ ಕೇಳಲಾಗಿತ್ತು. ಈ ವೇಳೆ ಕನ್ನಡ, ಕನ್ನಡ ಅಂದಿದ್ದಕ್ಕೆ ಪಹಲ್ಗಾಮ್ ದಾಳಿ ನಡೆದಿದ್ದು ಎಂದಿದ್ದರು. ಕನ್ನಡ ಹಾಡು ಹಾಡಿ ಅಂದಿದಕ್ಕೂ, ಪಹಲ್ಗಾಮ್ ದಾಳಿಗೂ ಏನ್ ಸಂಬಂಧ ಅನ್ನೋದು ದೊಡ್ಡ ಮಟ್ಟದ ಚರ್ಚೆಯಾಗಿತ್ತು. ಕನ್ನಡ ವಿರೋಧಿ ಗಾಯಕನನ್ನು ಬ್ಯಾನ್ ಮಾಡುವಂತೆ ಕರವೇ ಹೋರಾಟ ನಡೆಸಿತ್ತು.