ಬೇಸಿಗೆಯಲ್ಲಿ ಅತಿ ಹೆಚ್ಚು ಸಿಗುವ ಹಣ್ಣುಗಳಲ್ಲಿ ಮಾವು ಕೂಡಾ ಒಂದು. ಹಣ್ಣಿನ ರಾಜ ಎಂದು ಕರೆಸಿಕೊಳ್ಳೋ ಮಾವು ತಿನ್ನಲು ಬಲುರುಚಿ. ಹಣ್ಣಿನ ರಾಜನಾದ ಮಾವಿನಹಣ್ಣನ್ನು ಇಷ್ಟಪಡದೇ ಇರುವವರು ವಿರಳ. ಬೇಸಿಗೆಯಲ್ಲಿ ಆರಂಭವಾಗುವ ಇದರ ಅಬ್ಬರ ಮಳೆ ಶುರುವಾದ ಮೇಲೂ ಇರುತ್ತೆ. ಮಾವಿನ ಹಣ್ಣಿನ ಸೀಸನ್ ಆರಂಭವಾಯಿತೆಂದರೆ ಉಳಿದ ಹಣ್ಣನ್ನು ಯಾರೂ ಇಷ್ಟಪಡುವುದಿಲ್ಲ. ಮಾರುಕಟ್ಟೆ, ಹಣ್ಣಿನ ಅಂಗಡಿ ಸೇರಿದಂತೆ ಎಲ್ಲೆಡೆ ಮಾವಿನ ಹಣ್ಣಿನದ್ದೇ ಘಮ ತುಂಬಿಹೋಗುತ್ತದೆ.
ಮಾವಿನ ಹಣ್ಣಿನಲ್ಲಿ ಹೇರಳವಾದ ಫೈಬರ್ ಅಂಶವಿದೆ. ಅದೇ ರೀತಿ ವಿಟಮಿನ್ ಎ, ಬಿ, ಸಿ, ಕೆ, ಇ ಗಳಿದೆ. ಆರೋಗ್ಯವನ್ನು ಉತ್ತಮಗೊಳಿಸುವ ಹಣ್ಣಾದ ಇದು ಪರಿಪೂರ್ಣ ಹಣ್ಣು ಎಂದೇ ಹೇಳಬಹುದು. ಆದರೆ ಅತಿಯಾದರೆ ಅಮೃತವೂ ವಿಷ ಎನ್ನುತ್ತಾರೆ. ಈ ಮಾತು ಮಾವಿನ ಹಣ್ಣಿಗೂ ಅನ್ವಯವಾಗುತ್ತದೆ. ಮಾವಿನಹಣ್ಣು ಎಷ್ಟು ರುಚಿಯೋ ಅಷ್ಟೇ ಅಧಿಕ ಸೇವನೆಯಿಂದ ಆರೋಗ್ಯಕ್ಕೆ ಹಾನಿಕಾರಕವಾಗಿದೆ.
ಹೀಗಾಗಿ ಇಷ್ಟ ಎಂದು ಹೆಚ್ಚು ಮಾವಿನ ಹಣ್ಣನ್ನು ಸೇವಿಸಿದರೆ ಅನಾರೋಗ್ಯ ಕಾಡುವುದು ಪಕ್ಕಾ. ಹಾಗಾದರೆ ಮಾವಿನ ಹಣ್ಣಿನ ಅತಿಯಾದ ಸೇವನೆಯಿಂದ ಯಾವೆಲ್ಲ ಅನಾರೋಗ್ಯ ಕಾಡುತ್ತದೆ ಎನ್ನುವ ಮಾಹಿತಿ ಇಲ್ಲಿದೆ ತಿಳಿದುಕೊಳ್ಳಿ.
ಮಾವಿನ ಹಣ್ಣಿನಲ್ಲಿ ಯಥೇಚ್ಛವಾದ ಫೈಬರ್ ಅಂಶವಿದೆ. ಅತಿಯಾದ ಫೈಬರ್ ಅಂಶವಿರುವ ಆಹಾರವನ್ನು ಸೇವಿಸಿದರೆ ಅತಿಸಾರ ಕಾಡುವ ಸಾಧ್ಯತೆ ಹೆಚ್ಚು. ಅಲ್ಲದೆ ಮಾವಿನ ಹಣ್ಣಿನಲ್ಲಿ ಹೆಚ್ಚು ನೀರಿನಂಶ ಇರುವುದರಿಂದ ಅತಿಯಾದ ಸೇವನೆ ಒಳ್ಳೆಯದಲ್ಲ. ಆದ್ದರಿಂದ ರುಚಿಯಾಗಿದೆ ಎಂದು ಹೆಚ್ಚು ಮಾವಿನ ಹಣ್ಣು ತಿನ್ನುವ ಮುನ್ನ ಎಚ್ಚರಿಕೆವಹಿಸಿ.
ನೀವೇನಾದರೂ ಡಯಾಬಿಟೀಸ್ ಇರುವ ವ್ಯಕ್ತಿಗಳಾಗಿದ್ದರೆ ಮಾವಿನಹಣ್ಣಿನ ಬಗ್ಗೆ ಅತಿಯಾದ ಆಸೆ ಬೇಡ. ಮಾವಿನಹಣ್ಣು ಹೆಚ್ಚು ಸಿಹಿಯಾಗಿರುತ್ತದೆ. ನೈಸರ್ಗಿಕ ಸಕ್ಕರೆ ಗುಣವನ್ನು ಹೊಂದಿದೆ. ಹೀಗಾಗಿ ಮಧುಮೇಹಿಗಳು ಮಾವಿನ ಹಣ್ಣನ್ನು ಸೇವಿಸುವ ಮುನ್ನ ಚೂರು ಜಾಗೃತೆವಹಿಸಿ. ಮಾವಿನ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶ ಹೊಂದಿರುವ ಕಾರಣ ಮಧುಮೇಹಿಗಳು ವೈದ್ಯರ ಬಳಿ ಒಂದು ಬಾರಿ ಸಲಹೆ ಪಡೆದುಕೊಳ್ಳಿ.
ಮಾವಿನ ಹಣ್ಣಿನಲ್ಲಿ ಅತಿಯಾದ ನೀರಿನ ಅಂಶವಿರುವುದರಿಂದ ಅಲರ್ಜಿ ಉಂಟಾಗಬಹುದು ಎಚ್ಚರ. ಈಗಾಗಲೇ ನಿಮಗೇನಾದ್ರು ಅಲರ್ಜಿ ಸಂಬಂಧಿತ ಸಮಸ್ಯೆಗಳಿದ್ದರೆ ಮಾವಿನ ಹಣ್ಣು ಇನ್ನಷ್ಟು ಸಮಸ್ಯೆ ತಂದೊಡ್ಡಬಹುದು. ಹೆಚ್ಚಿನ ಮಾವಿನ ಹಣ್ಣಿನ ಸೇವನೆಯಿಂದ ಸೋರುವ ಮೂಗು, ಮೂಗಿನ ಹೊಳ್ಳೆಗಳಲ್ಲಿ ತುರಿಕೆ, ತಲೆನೋವಿನಂತಹ ಸಮಸ್ಯೆ ಕಾಡುವ ಸಂಭವ ಹೆಚ್ಚಾಗಿರುತ್ತದೆ.
ಮಾವಿನ ಹಣ್ಣಿನಲ್ಲಿ ಸರಿಸುಮಾರು 150 ಗ್ರಾಂನಷ್ಟು ಕ್ಯಾಲೋರಿ ಇರುತ್ತದೆ. ಹೀಗಾಗಿ ಹೆಚ್ಚು ಮಾವಿನ ಹಣ್ಣನ್ನು ಸೇವಿಸುವುದರಿಂದ ದೇಹದ ತೂಕ ಹೆಚ್ಚುವ ಸಂಭವವಿರುತ್ತದೆ. ಆದರೆ ಕೆಲವರಲ್ಲಿ ಮಾತ್ರ ದೇಹದ ತೂಕ ಹೆಚ್ಚಾಗುತ್ತದೆ. ನಿಮಗೇನಾದರೂ ತೂಕ ಹೆಚ್ಚಿಸಿಕೊಳ್ಳುವ ಆಸೆ ಇದ್ದರೆ ಮಾವಿನ ಹಣ್ಣು ತಿನ್ನಿ. ಅತಿಯಾದ ತೂಕವಿದ್ದೀರಿ ಎನಿಸಿದರೆ ಮಾವಿನ ಹಣ್ಣಿನ ಸೇವನೆಗೆ ಕೊಂಚ ತಡೆಯಿರಲಿ.
ಮಾವಿನ ಹಣ್ಣನ್ನು ಹೆಚ್ಚು ಸೇವಿಸುವುದರಿಂದ ಅಜೀರ್ಣತೆ ಕಾಡಬಹುದು.ಅದರಲ್ಲೂ ಮಾವಿನ ಕಾಯಿಯನ್ನು ತಿನ್ನುವುದಿಂದ ಅಜೀರ್ಣತೆ ಉಂಟಾಗುವ ಸಾಧ್ಯತೆಗಳು ಹೆಚ್ಚು.
ಅಲ್ಲದೆ ಮಾವಿನ ಹಣ್ಣಿನಿಂದ ಗ್ಯಾಸ್ಟ್ರಿಕ್ ಅಥವಾ ಅಸಿಡಿಟಿ ಕಾಡಬಹುದು. ಮಾವಿನ ಹಣ್ಣನ್ನು ಹಾಲಿನೊಂದಿಗೆ ಸೇವಿಸಿದರೆ ಅಥವಾ ಮಾವಿನ ಹಣ್ಣಿನ ಪಾಯಸದಂತಹ ಆಹಾರಗಳನ್ನು ಸೇವಿಸಿದರೆ ಆಸಿಡಿಟಿ ಉಂಟಾಗುತ್ತದೆ. ಅದ್ದರಿಂದ ಹೆಚ್ಚು ಸಿಹಿ ಎಂದು ಮಾವಿನ ಹಣ್ಣನ್ನು ಹೆಚ್ಚು ತಿನ್ನುವ ಮುನ್ನ ಜಾಗೃತರಾಗಿರಿ.