ಬೆಂಗಳೂರು: ಕನ್ನಡ, ಕನ್ನಡ, ಕನ್ನಡ ಅಂತಾ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಗಾಯಕ ಸೋನು ನಿಗಮ್ ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಲಾಗಿದೆ. ಸ್ಯಾಂಡಲ್ವುಡ್ನಿಂದ ಬ್ಯಾನ್ ಆಗುತ್ತಿದ್ದಂತೆ ಕನ್ನಡಿಗರೇ ಕ್ಷಮಿಸಿ ಎಂದು ಸೋನು ಅಂಗಲಾಚಿದ್ದಾರೆ. ಈ ಬಗ್ಗೆ ಮೊದಲ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಸಚಿವ ಶಿವರಾಜ್ ತಂಗಡಗಿ, ಕನ್ನಡ ಹಾಡು ಹಾಡಿ ಕರ್ನಾಟಕಕ್ಕೆ ಬಂದೂ ದುಡ್ಡು ಮಾಡುವಂತವರು ಹಗುರವಾಗಿ ಮಾತನಾಡುವುದನ್ನ ಸಹಿಸಲ್ಲ. ಈಗಾಗಲೇ FIR ಆಗಿದೆ. ಸರ್ಕಾರ ಇಂತಹವರ ವಿರುದ್ಧ ಕ್ರಮ ವಹಿಸುವ ಕೆಲಸ ಮಾಡ್ತಿದೆ. ಕನ್ನಡ ಚಿತ್ರರಂಗ ಅವರನ್ನ ಬ್ಯಾನ್ ಮಾಡಿರುವುದು ಅಭಿನಂದನ ಕಾರ್ಯವಾಗಿದೆ. ಯಾವ ನಿರ್ಮಾಪಕರು ಅವರಿಂದ ಹಾಡು ಹಾಡಿಸಬಾರದು. ಯಾವುದೇ ಸಂಗೀತ ಸಂಜೆಗೂ ಅವರನ್ನು ಕರೆಸಬಾರದು. ಯಾರೇ ಇತಂಹ ಕೆಲಸ ಮಾಡಿದ್ರು ಕನ್ನಡಿಗರು ಸಹಿಸಲ್ಲ.
ಸೋನು ನಿಗಮ್ ಅವರನ್ನು ಅರೆಸ್ಟ್ ಮಾಡುವ ಕುರಿತು ಸಿಎಂ ಗೃಹ ಸಚಿವರ ಜೊತೆ ಚರ್ಚೆ ಮಾಡುವೆ. ಕನ್ನಡ, ಕನ್ನಡಿಗರ ಮೇಲೆ ನಡೆಯುವ ದಬ್ಬಾಳಿಕೆ ವಿರುದ್ಧ ಕಾನೂನು ತರುವ ಕುರಿತು ಚರ್ಚೆ ಮಾಡುತ್ತಿದ್ದೇವೆ. ನಮ್ಮ ಭಾಷೆಗೆ ದ್ರೋಹ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಕುರಿತು ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಘಟನೆ ಹಿನ್ನೆಲೆ ಏನು?
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಂಗೀತ ಕಾರ್ಯಕ್ರಮ ಒಂದರಲ್ಲಿ ಕನ್ನಡ ಹಾಡು ಹಾಡು ಹಾಡಿ ಎಂದು ಕೇಳಿದ ಅಭಿಮಾನಿಯನ್ನು ಭಯೋತ್ಪಾದಕರಿಗೆ ಹೋಲಿಸಿ ಎಡವಟ್ಟು ಮಾಡಿಕೊಂಡಿದ್ದಾರೆ. ಕ್ಷಮೆ ಕೇಳುವವರೆಗೂ ಸೋನು ನಿಗಮ್ ಬ್ಯಾನ್ ಮಾಡಬೇಕೆಂಬ ಕೂಗು ಕೇಳಿತ್ತು. ಅದರಂತೆ ನಿನ್ನೆ ವಾಣಿಜ್ಯ ಚಲನಚಿತ್ರ ಮಂಡಳಿ, ನಿರ್ಮಾಪಕರು, ಸಂಗೀತ ನಿರ್ದೇಶಕರ ಸಭೆಯಲ್ಲಿ ಬ್ಯಾನ್ ಮಾಡೋದಾಗಿ ಘೋಷಣೆ ಮಾಡಿತ್ತು. ಚಿತ್ರರಂಗದಿಂದ ಬ್ಯಾನ್ ಆಗುತ್ತಿದ್ದಂತೆ ಕ್ಷಮಿಸಿ ಕನ್ನಡಿಗರೆ ಎಂದು ಸೋನು ನಿಗಮ್ ಪೋಸ್ಟ್ ಮಾಡಿದ್ದಾರೆ.