ಮಂಡ್ಯ :- ಕಲುಷಿತ ಆಹಾರ ಸೇವಿಸಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಳವಳ್ಳಿ ತಾಲ್ಲೂಕಿನ ಟಿ.ಕಾಗೇಪುರದ ಗೋಕುಲ ವಿದ್ಯಾಸಂಸ್ಥೆಯ ಮೂರು ಶಾಲೆಗಳ ಮಾನ್ಯತೆಯನ್ನು ಡಿಡಿಪಿಐ ಎಚ್. ಶಿವರಾಮೇಗೌಡ ರದ್ದುಪಡಿಸಿದ್ದಾರೆ.
ಮಾರ್ಚ್ 16ರಂದು ಉದ್ಯಮಿಯೊಬ್ಬರು ನೀಡಿದ್ದ ಕಲುಷಿತ ಆಹಾರ ಸೇವಿಸಿ ಮೇಘಾಲಯ ಮೂಲದ ಕೇರ್ಲಾಂಗ್ (13) ಮತ್ತು ನಮೀಬ್ ಮಾಂತೆ (14) ಎಂಬ ವಿದ್ಯಾರ್ಥಿಗಳು ಮೃತಪಟ್ಟು, 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು.
ಚಾಣಕ್ಯನ ಪ್ರಕಾರ ಈ ಕೆಲಸ ಮಾಡಿದ್ರೆ ಸಾಕು ಜೀವನದ ಪ್ರತಿ ಹೆಜ್ಜೆಯಲ್ಲೂ ಸಿಗುತ್ತೆ ಸಂತೋಷ-ಯಶಸ್ಸು..!
ಶಿಕ್ಷಣ ಇಲಾಖೆಯ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಟಿ.ಕಾಗೇಪುರ ಹಾಗೂ ಕಿರುಗಾವಲು ಗೋಕುಲ ವಿದ್ಯಾಸಂಸ್ಥೆಯ ಮಾನ್ಯತೆ ಹಿಂಪಡೆದು ಆ ಮೂರು ಶಾಲೆಗಳ ವಿದ್ಯಾರ್ಥಿಗಳಿಗೆ ಪರ್ಯಾಯ ದಾಖಲಾತಿ ವ್ಯವಸ್ಥೆ ಕಲ್ಪಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಇ. ಉಮಾ ಅವರಿಗೆ ಡಿಡಿಪಿಐ ಎಚ್.ಶಿವರಾಮೇಗೌಡ ಆದೇಶಿಸಿದ್ದಾರೆ.
2024-25ನೇ ಸಾಲಿನಲ್ಲಿ ಕಿರುಗಾವಲು ಗೋಕುಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 126, ಗೋಕುಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಕನ್ನಡ ಮಾಧ್ಯಮ) 202 ಹಾಗೂ ಗೋಕುಲ ಪಬ್ಲಿಕ್ ಶಾಲೆಯಲ್ಲಿ (ಆಂಗ್ಲ ಮಾಧ್ಯಮ) 15 ವಿದ್ಯಾರ್ಥಿಗಳು ದಾಖಲಾಗಿದ್ದರು.
‘ಮೇಘಾಲಯ ಮೂಲದ 24ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಟಿ.ಕಾಗೇಪುರದ ಗೋಕುಲ ವಿದ್ಯಾಸಂಸ್ಥೆಯಲ್ಲಿ ಅಕ್ರಮವಾಗಿ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೇ ಬೇರೆ ಶಾಲೆಯ ಹೆಸರಿನಲ್ಲಿ ಅನಧಿಕೃತವಾಗಿ ಎಸ್ಎಸ್ಎಲ್ಸಿವರೆಗೆ ತರಗತಿ ನಡೆಸುತ್ತಿದ್ದರು’ ಎಂಬ ಆರೋಪ ಕೇಳಿ ಬಂದಿದೆ.
ವರದಿ : ಗಿರೀಶ್ ರಾಜ್ ಮಂಡ್ಯ