ಸೂಪರ್ ಸ್ಟಾರ್ ರಜನಿಕಾಂತ್ ನಟಿಸುತ್ತಿರುವ ಜೈಲರ್ 2 ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ದೊಡ್ಡ ದೊಡ್ಡ ತಾರಾಬಳಗದ ಈ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ. ಕನ್ನಡದ ಸೆಂಚೂರಿ ಸ್ಟಾರ್ ಶಿವಣ್ಣ, ತೆಲುಗಿನ ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ, ನಟಿ ರಮ್ಯಾ ಕೃಷ್ಣನ್ ಹಾಗೂ ಯೋಗಿ ಬಾಬು ಸೇರಿದಂತೆ ಹಲವರು ಜೈಲರ್ 2 ಭಾಗವಾಗಿದ್ದಾರೆ.
ಬಾಲಯ್ಯ-ರಜನಿ-ಶಿವಣ್ಣ ಈ ಮೂವರ ಕಾಂಬಿನೇಷನ್ ಪ್ರೇಕ್ಷಕರಿಗೆ ಕಿಕ್ ಕೊಡುವುದು ಖಚಿತ. ಸದ್ಯ ಬಾಲಯ್ಯ ಜೈಲರ್ 2ಗಾಗಿ 20 ದಿನ ಕಾಲ್ಶೀಟ್ ಕೊಟ್ಟಿದ್ದಾರಂತೆ. ಈ 20 ದಿನಕ್ಕೆ ಬಾಲಯ್ಯಬಾಬು ಪಡೆದಿದ್ದು ಬರೋಬ್ಬರಿ 50 ಕೋಟಿ ಎನ್ನಲಾಗುತ್ತಿದೆ. ಜೈಲರ್ 2ಗಾಗಿ ಬಾಲಯ್ಯ ಬರೋಬ್ಬರಿ 50 ಕೋಟಿ ಸಂಭಾವನೆ ಪಡೆದಿದ್ದಾರಂತೆ.
2023ರಲ್ಲಿ ರಿಲೀಸ್ ಆಗಿದ್ದ ‘ಜೈಲರ್’ ಬ್ಲಾಕ್ ಬಸ್ಟರ್ ಹಿಟ್ ಕಂಡಿತ್ತು. ಚಿತ್ರದಲ್ಲಿ ಟೈಗರ್” ಮುತ್ತುವೇಲ್ ಪಾಂಡಿಯನ್ ಅವತಾರದಲ್ಲಿ ರಜನಿ ಅಬ್ಬರಿಸಿದ್ದರು. ವಿನಾಯಕನ್, ರಮ್ಯಾ ಕೃಷ್ಣನ್, ತಮನ್ನಾ ಭಾಟಿಯಾ, ವಸಂತ್ ರವಿ ಮತ್ತು ಇನ್ನೂ ಅನೇಕ ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅವರಲ್ಲದೆ, ಚಿತ್ರದಲ್ಲಿ ಶಿವ ರಾಜ್ಕುಮಾರ್, ಮೋಹನ್ಲಾಲ್ ಮತ್ತು ಜಾಕಿ ಶ್ರಾಫ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಜೈಲರ್ ಸಿನಿಮಾದ ಸೀಕ್ವೆಲ್ ಭಾಗವನ್ನು ಸೊಗಸಾಗಿ ನಿರ್ದೇಶಕ ನೆಲ್ಸನ್ ಕಟ್ಟಿಕೊಡುವ ಪ್ರಯತ್ನದಲ್ಲಿದ್ದಾರೆ.
ಬಾಲಯ್ಯ ಬಾಬಿ ಕೊಲ್ಲಿ ನಿರ್ದೇಶನದ ಡಾಕು ಮಹಾರಾಜ್ ಚಿತ್ರದಲ್ಲಿ ಅಬ್ಬರಿಸಿದ್ದರು. ಈ ಆಕ್ಷನ್ ಡ್ರಾಮಾ ಭರ್ಜರಿ ಹಿಟ್ ಕಂಡಿದೆ. ಸದ್ಯ ಬಾಲಯ್ಯ ಅಖಂಡ 2 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೊಂದೆಡೆ, ರಜನಿಕಾಂತ್ ನಟನೆಯ ಕೂಲಿ ಸಿನಿಮಾ ಆಗಸ್ಟ್ 14, 2025 ರಂದು ಬಿಡುಗಡೆಯಾಗಲಿದೆ. ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ.