ಭಾರತೀಯ ಚಿತ್ರರಂಗದ ಇಬ್ಬರು ಸೂಪರ್ ಸ್ಟಾರ್ಸ್‌ಗಳಾದ ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರನ್ನು ಒಂದೇ ಸಿನಿಮಾದಲ್ಲಿ ನೋಡಬೇಕು ಅನ್ನೋದು ಅಖಂಡ ಚಿತ್ರಪ್ರೇಮಿಗಳ ಕನಸು. ಈ ಕನಸು ಅದ್ಯಾವಾಗ ನನಸು ಆಗಲಿದೆಯೋ ಗೊತ್ತಿಲ್ಲ. ಈ ಇಬ್ಬರು ದಿಗ್ಗಜರನ್ನು ಒಂದೇ ಫ್ರೇಮ್‌ನಲ್ಲಿ ತರೋದಿಕ್ಕೆ ಸ್ಟಾರ್ ಡೈರೆಕ್ಟರ್‌ರೊಬ್ಬರು ಸಜ್ಜಾಗಿದ್ದರು. ರಜನಿ ಕಮಲ್ ಇಬ್ಬರು ಕಥೆ ಹೇಳಿ ಒಪ್ಪಿಸಿದ್ದರು. ಆದ್ರೆ ಆ ಪ್ರಾಜೆಕ್ಟ್ ನಿಂತು ಹೋಗಿದೆ.
ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜ್ ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರನ್ನು ಒಂದೇ ಫ್ರೇಮ್ ನಲ್ಲಿ ತರುವ ಕೆಲಸಕ್ಕೆ ಕೈ ಹಾಕಿದ್ದರು. ಆದರೆ ಆ ಪ್ರಾಜೆಕ್ಟ್ ಟೇಕಾಫ್ ಆಗಲಿಲ್ಲ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ, ಒಂದು ಸಂದರ್ಶನದಲ್ಲಿ ಲೋಕೇಶ್, ಕಮಲ್ ಹಾಸನ್ ಮತ್ತು ರಜನಿಕಾಂತ್ ಅವರಿಗೆ ಒಮ್ಮೆ ಒಂದು ಸ್ಕ್ರಿಪ್ಟ್ ಹೇಳಿದ್ದೆ. ಅದರಲ್ಲಿ ಇಬ್ಬರೂ ಒಟ್ಟಿಗೆ ನಟಿಸಬೇಕಿತ್ತು. ಸ್ವತಃ ಕಮಲ್ ಹಾಸನ್ ಈ ಚಿತ್ರ ನಿರ್ಮಿಸಲು ಒಪ್ಪಿಗೆ ಸೂಚಿಸಿದ್ದರು. ಕೆಲವು ಕಾರಣಗಳಿಂದಾಗಿ ಈ ಪ್ರಾಜೆಕ್ಟ್ ಟೇಕಾಪ್ ಆಗಲಿಲ್ಲ. ಜೈಲರ್ ಮತ್ತು ವಿಕ್ರಮ್ ಸಿನಿಮಾ ಬಿಡುಗಡೆಗೂ ಮುನ್ನವೇ ಈ ಚರ್ಚೆ ನಡೆದಿತ್ತು. ಈ ಚಿತ್ರ ಇಬ್ಬರು ದರೋಡೆಕೋರರ ಕಥಾಹಂದರ ಸಿನಿಮಾದ ಹೈಲೆಟ್ ಆಗಿತ್ತು.
ಆದರೆ, ಈಗ ವಿಷಯಗಳು ಬದಲಾಗಿವೆ, ಮತ್ತು ಕಮಲ್ ಹಾಸನ್ ಮತ್ತು ರಜನಿಕಾಂತ್ ವರ್ಚಸ್ಸು, ಮಾರುಕಟ್ಟೆ ಮೌಲ್ಯ ಗಗನಕ್ಕೇರಿದೆ. ಆ ಸಿನಿಮಾ ಸಾಕಾರವು ಪ್ರಸ್ತುತ ಅಸಾಧ್ಯವಾಗಿದೆ. ಆದರೆ, ಭವಿಷ್ಯದಲ್ಲಿ ಅದು ಸಂಭವಿಸಿದಲ್ಲಿ, ಇಬ್ಬರು ಹಳೆಯ ದರೋಡೆಕೋರರ ಬಗ್ಗೆ ಅದೇ ಕಥೆಯಾಗಿರುತ್ತದೆ, ಅದರಲ್ಲಿ ಯಾವುದೇ ಬದಲಾವಣೆಗಳಿಲ್ಲ, ಏಕೆಂದರೆ ಈ ಕಲ್ಪನೆ ಇನ್ನೂ ಪ್ರಬಲವಾಗಿದೆ ಎಂದಿದ್ದಾರೆ.
ಲೋಕೇಶ್ ನಿರ್ದೇಶನದಲ್ಲಿ ರಜನಿ ಕಮಲ್ ನಟಿಸಿದ್ದರೆ, ಇದು ಭಾರತದ ಅತಿದೊಡ್ಡ ಚಿತ್ರವಾಗಲಿದೆ, ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರನ್ನು ಪರದೆಯ ಮೇಲೆ ಒಟ್ಟಿಗೆ ನೋಡುವ ಕಾಲಿವುಡ್ ಪ್ರೇಕ್ಷಕರ ಬಹುದಿನಗಳ ಕನಸನ್ನು ಈಡೇರಿಸುತ್ತದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ಲೋಕೇಶ್ ಕನಗರಾಜ್ ಕೂಲಿ ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಅತ್ತ ರಜನಿ ಜೈಲರ್ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಕಮಲ್ ಹಾಸನ್ ಥಗ್ ಲೈಫ್ ಬಿಡುಗಡೆಗೆ ಕಾಯುತ್ತಿದ್ದಾರೆ.