ನಮ್ಮನೆ ಯುವರಾಣಿ ಸೀರಿಯಲ್ ಮೂಲಕ ಖ್ಯಾತಿ ಗಳಿಸಿದ ಅಂಕಿತಾ ಅಮರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ಮೂಲಕ ಇಂಡಸ್ಟ್ರೀಗೆ ಎಂಟ್ರಿ ಕೊಟ್ಟಿದ್ದ ಅಂಕಿತಾಗೆ ಈಗ ಬೊಂಬಾಟ್ ಅವಕಾಶ ಸಿಕ್ಕಿದೆ. ಜಸ್ಟ್ ಮ್ಯಾರೇಡ್ ಚಿತ್ರ ಬಿಡುಗಡೆ ಎದುರು ನೋಡುತ್ತಿರುವ ಅಂಕಿತಾ ರಿಯಲ್ ಸ್ಟಾರ್ ಉಪೇಂದ್ರಗೆ ನಾಯಕಿಯಾಗಿ ನಟಿಸುವ ಬಿಗ್ ಚಾನ್ಸ್ ದೊರೆತಿದೆ.
ನಾಗಣ್ಣ ಹಾಗೂ ಉಪೇಂದ್ರ ಕಾಂಬಿನೇಷನ್‌ನ ಭಾರ್ಗವ ಸಿನಿಮಾಗೆ ಅಂಕಿತಾ ಅಮರ್ ನಾಯಕಿ. ಭಾರ್ಗವ ಚಿತ್ರದಲ್ಲಿ ನಟಿಗೆ ಉತ್ತಮ ಪಾತ್ರವೇ ಸಿಕ್ಕಿದೆ. ಉಪೇಂದ್ರ ಅವರು ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದಲ್ಲಿ ಅಂಕಿತಾ ನಟನೆ ನೋಡಿ ‘ಭಾರ್ಗವ’ ಚಿತ್ರಕ್ಕೆ ಇವರೇ ಸೂಕ್ತ ಎಂದು ಹೇಳಿದ್ದರು. ಹೀಗಾಗಿ ಅಂಕಿತಾಗೆ ಉಪೇಂದ್ರ ಜೊತೆ ನಟಿಸುವ ಒಂದೊಳ್ಳೆಯ ಅವಕಾಶ ಸಿಕ್ಕಿದೆ.
ಭಾರ್ಗವ ಸಿನಿಮಾಗೆ ಸೂರಪ್ಪ ಬಾಬು ಬಂಡವಾಳ ಹೂಡುತ್ತಿದ್ದಾರೆ. 2023ರಲ್ಲಿ ಬಿಡುಗಡೆಯಾಗಿದ್ದ ಕುಟುಂಬ ಚಿತ್ರದ ಮೂಲಕ ನಾಗಣ್ಣ ಉಪೇಂದ್ರ ಕೈ ಜೋಡಿಸಿದ್ದರು. ಈ ಚಿತ್ರ ಹಿಟ್ ಬಳಿಕ ಗೋಕರ್ಣ, ಗೌರಮ್ಮ, ದುಬೈ ಸೀನು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆದಾದ ಬಳಿಕ ಇವರಿಬ್ಬರು ಮತ್ತೆ ಒಂದಾಗಲಿದ್ದಾರೆ ಅನ್ನೋ ಸುದ್ದಿ ಸುದ್ದಿಯಾಗಿಯೇ ಉಳಿದಿತ್ತು. ಅದಕ್ಕೀಗ ಕಾಲ ಕೂಡಿಬಂದಿದ್ದು, ಈ ಕ್ರೇಜಿ ಕಾಂಬಿನೇಷನ್ ನ್ನು ಸೂರಪ್ಪ ಬಾಬು ಒಟ್ಟಿಗೆ ತೆರೆಗೆ ತರುತ್ತಿದ್ದಾರೆ. ನಾಗಣ್ಣ ನಿರ್ದೇಶನದ ಕೋಟಿಗೊಬ್ಬ, ಬಂಧು ಬಳಗ ಚಿತ್ರಗಳಿಗೆ ಇದೇ ಸೂರಪ್ಪ ಬಾಬು ಹಣ ಹಾಕಿದ್ದರು.