ಧಾರವಾಡ, ಮೇ, 14: ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಹಾಗೂ ಜವಾಬ್ದಾರಿಯುತವಾಗಿ ಕೆಲಸಮಾಡಿ ಎಂದು ಕೃಷಿ ಸಚಿವರು ಸೂಚಿಸಿದ್ದಾರೆ.
ರೈತರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಜೊತೆಗೆ ಹೊಸ ಆವಿಷ್ಕಾರ, ವಿಜ್ಞಾನ, ತಂತ್ರಜ್ಞಾನಗ ಬಗ್ಗೆ ಅರಿವು ಮೂಡಿಸಿ, ಕೃಷಿ ಜಮೀನುಗಳಿಗೆ ಅವುಗಳನ್ನು ವರ್ಗಾವಣೆ ಮಾಡಿ ಎಂದು ಸಚಿವರು ತಿಳಿಸಿದರು..
ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಬೆಳಗಾವಿ ವಿಭಾಗದ 7 ಜಿಲ್ಲೆಗಳ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನೆ ನಡೆಸಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿಯವರು, ಹೈಟೆಕ್ ಹಾರ್ವೆಸ್ಟ್ ಹಬ್ ,ಕೃಷಿ ಭಾಗ್ಯ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.ಇದರಿಂದಾಗುವ ಪರಿಣಾಮಕಾರಿ ಬದಲಾವಣೆಗಳ ಬಗ್ಗೆ ಕೃಷಿಕರಿಗೆ ಮಾಹಿತಿ ನೀಡಿ ಎಂದು ಅವರು ಹೇಳಿದರು..
ಅಂತರಾಷ್ಟೀಯ ಮಾರುಕಟ್ಟೆಯಲ್ಲಿ ಫಾಸ್ಪರಿಕ್ ಆಮ್ಲದ ಬೆಲೆ ಹೆಚ್ಚಿರುವುದರಿಂದ,ಡಿಎಪಿಗೆ ಪರ್ಯಾಯಾವಾಗಿ ಕಾಂಪ್ಲೆಕ್ಸ್ ಗೊಬ್ಬರ, 15 15 15, 17 17 17 ಹಾಗೂ 19 19 19 ಪರ್ಯಾಯಾವಾಗಿ ಎಲ್ಲಾ ಬೆಳೆಗಳಿಗೂ ಉಪಯೋಗಿಸಬೇಕು..
ಪೊಟಾಷ್ ಇರುವುದರಿಂದ ಸಮತೋಲನ ಗೊಬ್ಬರ ಒದಗಿಸಲಿದ್ದು, ಪೊಟಾಷ್ ನಿಂದ ಬೆಳೆಗಳಿಗೆ ರೋಗ, ಕೀಟ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.. ಮಣ್ಣಿನ ಫಲವತ್ತತೆ ಸಹ ಕಾಪಾಡಿ ಸಮತೋಲನದಲ್ಲಿ ಬೆಳೆಗಳಿಗೆ ಪೋಷಾಕಾಂಶ ಒದಗಿಸುತ್ತದೆ ಈ ಹಿನ್ನಲೆಯಲ್ಲಿ ರೈತರಿಗೆ ಪರ್ಯಾಯ ಗೊಬ್ಬರದ ಬಗ್ಗೆ ಪ್ರಚಾರ ಮಾಡುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು..
ಯಾಂತ್ರೀಕರಣ ಯೋಜನೆ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು, ಹೊಸ ತಳಿಗಳ ಪ್ರಯೋಜನದ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು ಹಾಗೂ ಹಾರ್ವೇಸ್ಟರ್ ಹಬ್ ಗಳನ್ನು ಎಲ್ಲಾ ಜಿಲ್ಲೆಗಳಲ್ಲೂ ಅನುಷ್ಠಾನಗೊಳಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಮಣ್ಣಿನ ಪರೀಕ್ಷೆ ಅತ್ಯಂತ ಮುಖ್ಯವಾದದ್ದು, ಇದನ್ನು ಹೆಚ್ಚಾಗಿ ಅನುಷ್ಠಾನ ಮಾಡಿ ರಾಸಾಯನಿಕಗಳ ಮಿತ ಬಳಕೆ ಹಾಗೂ ನ್ಯಾನೋ ಗೊಬ್ಬರ ಬಳಕೆ ಅನುಕೂಲಗಳ ಬಗ್ಗೆ ಜಾಗೃತಿ ಮೂಡಿಸಿ ಎಂದು ಅವರು ಸೂಚಿಸಿದರು. ಎಲ್ಲಾ ಅಧಿಕಾರಿಗಳು ರೈತರ ಬಳಿ ಹೋಗಿ ಸಮಸ್ಯೆ ಆಲಿಸಬೇಕು, ಕೃಷಿಕರ ಜಮೀನುಗಳಿಗೆ ಭೇಟಿ ನೀಡದ ,ಅವರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೃಷಿ ಸಚಿವರು ಎಚ್ಚರಿಕೆ ನೀಡಿದರು.
ಬೆಳೆ ವಿಮೆ, ಕಬ್ಬಿನಲ್ಲಿ ಗೊಣ್ಣೆಹುಳ ನಿರ್ವಹಣೆ, ಶೇಂಗಾ ಬೆಳೆಯಲ್ಲಿ ಲಘು ಪೋಷಕಾಂಶಗಳ ಬಳಕೆ , ತೊಗರಿ ಬೆಳೆಯಲ್ಲಿ ಇಳುವರಿ ಹೆಚ್ಚಳ ತಾಂತ್ರಿಕತೆಯ ಬಗ್ಗೆ ರೈತರಿಗೆ ಜಾಗೃತಿ ಮೂಡಿಸುವಂತೆ ಸಚಿವರು ನಿರ್ದೇಶನ ನೀಡಿದರು..
ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆಯಲ್ಲಿ ಯಾವುದೇ ಗೊಂದಲವಾಗದಂತೆ ಮುಂಜಾಗ್ರತೆ ವಹಿಸಲು ಸೂಚನೆ ನೀಡಿದ ಸಚಿವರು,
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ವ್ಯವಸ್ಥಿತ ಹಂಚಿಕೆಗೆ ಸಚಿವರು ನಿರ್ದೇಶಿಸಿದರು..
ಸಭೆಯಲ್ಲಿ ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್, ನಿರ್ದೇಶಕ ಡಾ.ಜಿ.ಟಿ.ಪುತ್ರ, ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಬಂಥನಾಳ್, ಸೆಕೆಂಡರಿ ಅಗ್ರಿಕಲ್ಚರಲ್ ನಿರ್ದೇಶಕ ವೆಂಕಟರಮಣರೆಡ್ಡಿ ಉಪಸ್ಥಿತರಿದ್ದರು..