ಬಾಗಲಕೋಟೆ:- ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆ, ಹಲ್ಲೆ ಯತ್ನಗಳು ವರದಿ ಆಗಿತ್ತಿದೆ. ಅದರಂತೆ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಕ್ರಿಕೆಟ್ ಬಾಲ್ ವಿಚಾರಕ್ಕೆ ಜಗಳ ತೆಗೆದು ಯುವಕ ಒಡೆದ ಬಿಯರ್ ಬಾಟಲ್ನಿಂದ ಶಿಕ್ಷಕನಿಗೆ ಇರಿದ ಘಟನೆ ಜರುಗಿದೆ.
ಘಟನೆ ಪರಿಣಾಮ 36 ವರ್ಷದ ಶಿಕ್ಷಕ ರಾಮಪ್ಪ ಪೂಜಾರಿಗೆ ಗಂಭೀರ ಗಾಯವಾಗಿದೆ. ಹಲ್ಲೆ ಮಾಡಿರುವ ಯುವಕನನ್ನು ಪವನ್ ಎಂದು ಗುರುತಿಸಲಾಗಿದೆ. ಬಿಎಲ್ಡಿಇ ಖಾಸಗಿ ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ರಾಮಪ್ಪ ಪೂಜಾರಿ ಮತ್ತು ಪವನ್ ಜಾಧವ್ ಅಕಪಕ್ಕದ ಮನೆಯವರು. ಕ್ರಿಕೆಟ್ ಆಡುವಾಗ ಬಾಲ್ ಶಿಕ್ಷಕ ರಾಮಪ್ಪ ಪೂಜಾರಿ ಮನೆಯಲ್ಲಿ ಬಿದ್ದಿತ್ತು. ನಿಮ್ಮ ಮನೆಯಲ್ಲಿ ಬಾಲ್ ಹೋಗಿದೆ ಕೊಡಿ ಎಂದು ಆರೋಪಿ ಪವನ್ ಜಾಧವ್, ರಾಮಪ್ಪ ಪೂಜಾರಿಯವರಿಗೆ ಕೇಳಿದ್ದಾರೆ. ಅದಕ್ಕೆ, ರಾಮಪ್ಪ ಪೂಜಾರಿ ಇಲ್ಲಿ ಬಾಲ್ ಬಂದಿಲ್ಲ ಎಂದಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ಕಿರಿಕ್ ಆಗಿದೆ.
ನಂತರ ಶಾಲೆಗೆ ಬಂದ ಪವನ್ ಸ್ಟಾಫ್ ರೂಂ ಒಳಗೆ ನುಗ್ಗಿ ಬಿಯರ್ ಬಾಟಲ್ನಿಂದ ಶಿಕ್ಷಕ ರಾಮಪ್ಪ ಪೂಜಾರಿಗೆ ಇರಿದಿದ್ದಾನೆ. ಇದರಿಂದ ಗಾಯಗೊಂಡ ರಾಮಪ್ಪ ಪೂಜಾರಿಯವರನ್ನು ಸಾವಳಗಿಯಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಳಗಿ ಠಾಣೆ ಪೊಲೀಸರು ಪವನ್ ಜಾದವ್ನನ್ನು ಬಂಧಿಸಿದ್ದಾರೆ.