ಹುಬ್ಬಳ್ಳಿ:- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಇ-ಕಾಮರ್ಸ್ ತಾಣಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಇ-ಕಾಮರ್ಸ್ ತಾಣಗಳಲ್ಲಿ ಪಾಕ್ ಸರಕು ಮಾರಿದರೆ ಹುಷಾರ್ ಎಂದಿದ್ದಾರೆ.
ಪಾಕಿಸ್ತಾನದ ಸರಕುಗಳ ಮಾರಾಟ ಮಾಡದಂತೆ ಎಲ್ಲಾ ವಾಣಿಜ್ಯ ಕಂಪನಿಗಳು ಮತ್ತು ಕಾರ್ಪೋರೇಷನ್ ಸಂಸ್ಥೆಗಳಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಈ ಹಿಂದೆಯೇ ನೋಟಿಸ್ ಜಾರಿ ಮಾಡಿದೆ. ಆದರೂ ಕೆಲ ಇ-ಕಾಮರ್ಸ್ ತಾಣಗಳು, ಸಂಸ್ಥೆಗಳು ಸರಕು ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಕೇಂದ್ರ ಸರ್ಕಾರ ಇದನ್ನು ಸಹಿಸುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.
ಅಮೇಜಾನ್, ಫ್ಲಿಪ್‌ಕಾರ್ಟ್, ಯು ಬೈ ಇಂಡಿಯಾ, Etsy, ದಿ ಫ್ಲ್ಯಾಗ್ ಕಂಪನಿ ಮತ್ತು ಕಾರ್ಪೊರೇಷನ್‌ಗಳಿಗೆ ಸರಕು ಮಾರಾಟ ಮಾಡದಂತೆ ನೋಟಿಸ್ ಜಾರಿ ಮಾಡಲಾಗಿದೆ. ಆದರೂ ಈ ಆದೇಶ ಉಲ್ಲಂಘಿಸುತ್ತಿರುವುದು ಗೊತ್ತಾಗಿದೆ. ದೇಶದ ಹಿತದೃಷ್ಟಿಯಿಂದ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಸಚಿವ ಜೋಶಿ ಹೇಳಿದ್ದಾರೆ.
ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಪಾಕಿಸ್ತಾನ ಸಂಬಂಧಿತ ಎಲ್ಲಾ ವಸ್ತುಗಳನ್ನು ತಕ್ಷಣವೇ ತೆಗೆದುಹಾಕಬೇಕು ಮತ್ತು ರಾಷ್ಟ್ರೀಯ ಕಾನೂನನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.