ಬೆಂಗಳೂರು:- ಸಿಗರೇಟ್ ವಿಚಾರಕ್ಕೆ ಗಲಾಟೆ ನಡೆದು ಕಾರಿನಿಂದ ಗುದ್ದಿ ಯುವಕನನ್ನು ‘ಮರ್ಡರ್’ ಮಾಡಿರುವ ಘಟನೆ ಕೋಣನಕುಂಟೆ ಕ್ರಾಸ್,ಕನಕಪುರ ರಸ್ತೆ ತಿರುವಿನ ಬಳಿ ಜರುಗಿದೆ. ಘಟನೆಯ ಭಯಾನಕ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ದೃಶ್ಯದಲ್ಲಿ ಆರೋಪಿಯ ಅಟ್ಟಹಾಸ ಬೆಚ್ಚಿ ಬೀಳುವಂತಿದೆ. ಮೇ.10 ರಂದು ಬೆಳಗಿನ ಜಾವ ನಾಲ್ಕು ಗಂಟೆಗೆ ನಡೆದ ಘಟನೆ ಇದಾಗಿದೆ.
ಟೆಕ್ಕಿ ಸಂಜಯ್ ಕೊಲೆಯಾದ ದುರ್ದೈವಿ. ಪ್ರತೀಕ್ ಎಂಬಾತನಿಂದ ಕಾರು ಗುದ್ದಿಸಿ ಕೊಲೆಯಾಗಿದೆ. ಕನಕಪುರ ರಸ್ತೆಯ ವಸಂತಪುರ ಕ್ರಾಸ್ನಲ್ಲಿ ಘಟನೆ ನಡೆದಿದೆ.
ಸಾಫ್ಟ್ವೇರ್ ಉದ್ಯೋಗಿಗಳಾಗಿದ್ದ ಸಂಜಯ್, ಕಾರ್ತಿಕ್ ಸಿಗರೇಟ್ ಸೇದಲು ಕಚೇರಿಯಿಂದ ಹೊರಬಂದಿದ್ದರು. ಇಲ್ಲಿನ ರಸ್ತೆ ಬದಿಯ ಸೈಕಲ್ನಲ್ಲಿ ಸಿಗರೇಟ್ ತೆಗೆದುಕೊಂಡಿದ್ದರು. ಅಲ್ಲೇ ನಿಂತು ಇಬ್ಬರು ಟೆಕ್ಕಿಗಳು ಸಿಗರೇಟ್ ಸೇದುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಪ್ರತೀಕ್ ಕಾರಿನಿಂದ ಇಳಿಯದೇ, ಸಂಜಯ್ಗೆ ಸಿಗರೇಟ್ ತಂದುಕೊಡುವಂತೆ ಹೇಳಿದ್ದ. ಇದರಿಂದ ಕೋಪಗೊಂಡ ಸಂಜಯ್ ಮತ್ತು ಕಾರ್ತಿಕ್ ಕಾರಿನಲ್ಲಿದ್ದ ಪ್ರತೀಕ್ ನಡುವೆ ಗಲಾಟೆ ನಡೆದಿತ್ತು.
ಗಲಾಟೆ ಜೋರಾಗಿ ಅಂಗಡಿಯವರು ಬಿಡಿಸಿ ಕಳುಹಿಸಿದ್ದರು. ಕೋಪಗೊಂಡ ಪ್ರತೀಕ್ ಕಾರಿನಲ್ಲಿ ಮುಂದೆ ಹೋಗಿ ರಸ್ತೆ ಪಕ್ಕದಲ್ಲೇ ನಿಲ್ಲಿಸಿಕೊಂಡಿದ್ದ. ಸಿಗರೇಟ್ ಸೇದಿ ಇಬ್ಬರೂ ಬೈಕ್ನಲ್ಲಿ ಮುಂದೆ ಬರುತ್ತಿದ್ದಂತೆ. ವೇಗವಾಗಿ ಬಂದು ಇಬ್ಬರು ಹೋಗುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದ್ದ. ಪರಿಣಾಮ, ಸಂಜಯ್ ಸ್ಥಳದಲ್ಲೇ ಸಾವನ್ನಪ್ಪಿದ. ಕಾರ್ತಿಕ್ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರಂಭದಲ್ಲಿ ಇದು ಅಪಘಾತ ಎಂದು ತಿಳಿದಿದ್ದ ಪೊಲೀಸರಿಗೆ ಸ್ಥಳದಲ್ಲಿದ್ದ ಸಿಸಿಟಿವಿ ಪರಿಶೀಲನೆ ವೇಳೆ ಅಸಲಿ ವಿಚಾರ ಬಯಲಿಗೆ ಬಂದಿದೆ.