ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ” ಎಂಬುದು ಎಲ್ಲರಿಗು ಗೊತ್ತಿರುವ ಗಾದೆ. ಉಪ್ಪಿಲ್ಲದೆ ಊಟ ತಯಾರಿಸಲು ಅಸಾಧ್ಯ. ಷಡ್ರಸಗಳಲ್ಲಿ ಲವಣಕ್ಕೆ (ಉಪ್ಪು) ಹೆಚ್ಚಿನ ಮಹತ್ವ. ಉಪ್ಪನ್ನು ಹೀಗೆ ಬರೀ ಊಟಕ್ಕೆ ಮಾತ್ರ ಬಳಸುತ್ತಾರೆ ಎಂದರೆ ತಪ್ಪಾಗುತ್ತದೆ. ಇದರ ಹೊರತಾಗಿ ಇದನ್ನು ಮೂಲಿಕೆಯಾಗಿ ಮತ್ತು ನಂಜು ನಿವಾರಕವನ್ನಾಗಿ ಬಳಸುತ್ತಾರೆ. ಉಪ್ಪನ್ನು ಸ್ನಾನ ಮಾಡಲು ಸಹ ಬಳಸುತ್ತಾರೆ. ಬಾತ್ ಸಾಲ್ಟ್ ಎಂಬ ಹೆಸರಿನಲ್ಲಿ ಇದು ದೊರೆಯುತ್ತದೆ. ಉಪ್ಪು ನೀರಿನ ಸ್ನಾನದಿಂದ ಹಲವಾರು ಪ್ರಯೋಜನಗಳು ನಮಗೆ ಲಭಿಸುತ್ತವೆ.
ಚರ್ಮಕ್ಕೆ ಒಳ್ಳೆಯದು:
ಸ್ನಾನದ ನೀರಿಗೆ ಉಪ್ಪು ಬೆರೆಸಿ ಸ್ನಾನ ಮಾಡುವುದರಿಂದ ಚರ್ಮದಲ್ಲಿ ಅಡಗಿರುವ ಕೊಳೆ ಸ್ವಚ್ಛವಾಗುತ್ತದೆ. ಅಲ್ಲದೆ ಇದು ಸತ್ತ ಜೀವಕೋಶಗಳನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ, ಬೇಸಿಗೆಯಲ್ಲಿ ಬೆವರಿನಿಂದ ಉಂಟಾಗುವ ರಿಂಗ್ವರ್ಮ್, ತುರಿಕೆ ಇತ್ಯಾದಿ ಚರ್ಮದ ಸೋಂಕುಗಳ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತದೆ. ಜೊತೆಗೆ ಇದು ಚರ್ಮವನ್ನು ಕಾಂತಿಯುತವಾಗಿಸಲು ಸಹಕಾರಿ. ಅಷ್ಟೇ ಅಲ್ಲದೆ ಕಲ್ಲುಪ್ಪು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಅದು ಚರ್ಮವನ್ನು ಸೋಂಕುಗಳಿಂದ ರಕ್ಷಿಸುತ್ತದೆ.
ಕೀಲು ನೋವಿನಿಂದ ಪರಿಹಾರ:
ಪ್ರತಿದಿನ ಓಡಾಟದ ಸಂದರ್ಭದಲ್ಲಿ ದೇಹದಲ್ಲಿ ನೋವು ಕಾಣಿಸಿಕೊಂಡರೆ, ಬೆಚ್ಚಗಿನ ನೀರಿಗೆ ಒಂದು ಚಮಚ ಉಪ್ಪು ಸೇರಿಸಿ ಸ್ನಾನ ಮಾಡಬೇಕು. ಇದು ನೋವನ್ನು ನಿವಾರಿಸಲು, ಕೀಲು ನೋವು, ಮೊಣಕಾಲು ಮತ್ತು ಬೆನ್ನು ನೋವಿನಿಂದಲೂ ಪರಿಹಾರ ನೀಡುತ್ತದೆ. ಬೆಚ್ಚಗಿನ ನೀರಿಗೆ ಕಲ್ಲುಪ್ಪು ಸೇರಿಸಿ ಸ್ನಾನ ಮಾಡುವುದರಿಂದ ಊತ ಸಹ ಕಡಿಮೆಯಾಗುತ್ತದೆ.
ಒತ್ತಡವನ್ನು ದೂರ ಮಾಡುತ್ತದೆ:
ಪ್ರತಿದಿನ ಸ್ನಾನದ ನೀರಿಗೆ ಉಪ್ಪು ಬೆರೆಸಿ ಸ್ನಾನ ಮಾಡುವುದರಿಂದ ಆಯಾಸ ಮತ್ತು ಒತ್ತಡ ನಿವಾರಣೆಯಾಗುತ್ತದೆ. ಅಲ್ಲದೆ ಇದು ಆಯಾಸವನ್ನು ನಿವಾರಿಸುವುದರ ಜೊತೆಗೆ ದೇಹಕ್ಕೆ ಉಲ್ಲಾಸವನ್ನು ಒದಗಿಸುತ್ತದೆ.
ದೇಹವನ್ನು ನಿರ್ವಿಷಗೊಳಿಸುತ್ತದೆ:
ಕಲ್ಲುಪ್ಪು ಬೇರೆಸಿದ ನೀರಿನಿಂದ ಸ್ನಾನ ಮಾಡುವುದರಿಂದ ಅದು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಜೊತೆಗೆ ಇದು ದೇಹದಲ್ಲಿ ಸುಡುವ ಸಂವೇದನೆ, ತುರಿಕೆ ಮತ್ತು ಊತದಂತಹ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.
ನಕಾರಾತ್ಮಕ ಶಕ್ತಿಯನ್ನು ದೂರ ಮಾಡಲು ಸಹಕಾರಿ:
ಉಪ್ಪು ಉತ್ತಮ ಶುದ್ಧೀಕರಣ ಗುಣಗಳನ್ನು ಹೊಂದಿರುವುದರಿಂದ ಸ್ನಾನದ ನೀರಿಗೆ ಚಿಟಿಕೆ ಉಪ್ಪನ್ನು ಸೇರಿಸಿ ಸ್ನಾನ ಮಾಡುವುದರಿಂದ ದೇಹದಿಂದ ನಕಾರಾತ್ಮಕ ಶಕ್ತಿ ಮತ್ತು ಕಲ್ಮಶಗಳನ್ನು ತೆಗೆದು ಹಾಕಬಹುದು.
ಸ್ನಾನಕ್ಕೆ ಉಪ್ಪುನೀರನ್ನು ತಯಾರಿಸುವುದುಹೇಗೆ:
ಮೊದಲು ಒಂದು ಬಕೆಟ್ ತೆಗೆದುಕೊಂಡು ಅದಕ್ಕೆ ನೀರು ತುಂಬಿಸಿ. ಈ ನೀರಿಗೆ ಒಂದು ಚಮಚ ಉಪ್ಪು ಸೇರಿಸಿ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನೀರಿನಲ್ಲಿ ಉಪ್ಪು ಬೆರೆತ ನಂತರ ಸ್ನಾನ ಮಾಡಿ. ಉಪ್ಪು ನೀರಿನಿಂದ ಸ್ನಾನ ಮಾಡುವುದು ನಿಮ್ಮ ಚರ್ಮಕ್ಕೂ ಪ್ರಯೋಜನಕಾರಿ ಹಾಗೆಯೇ ಇದರಿಂದ ನಕಾರಾತ್ಮಕ ಶಕ್ತಿಯನ್ನು ಕೂಡ ದೂರ ಮಾಡಬಹುದು.