ಹುಬ್ಬಳ್ಳಿ:- ಇತ್ತೀಚೆಗೆ ಕಮರಿಪೇಟೆಯಲ್ಲಿ ನಡೆದ ಘಟನೆಯಲ್ಲಿ ಚಾಕು ಇರಿತದಿಂದ ಸಾವಿಗಿಡಾದ ಗುರುಸಿದ್ದೇಶ್ವರ ನಗರದ ಚೇತನ ಅವರ ಮನೆಗೆ ಪೂರ್ವ ಕ್ಷೇತ್ರದ ಶಾಸಕರು, ಸ್ಲಮ್ ಬೋರ್ಡ್ ಅಧ್ಯಕ್ಷರಾದ ಪ್ರಸಾದ ಅಬ್ಬಯ್ಯ ಅವರು ಭೇಟಿನೀಡಿ ತಂದೆ, ತಾಯಿ ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ವೈಯಕ್ಯಿವಾಗಿ 50ಸಾವಿರ ರೂ. ಆರ್ಥಿಕ ಸಹಾಯ ಮಾಡಿದರು.
ಅವರು, ಶನಿವಾರ ಇಲ್ಲಿನ ಮೂರು ಸಾವಿರಮಠದ ಹಿಂಬಾಗದ ಗುರುಸಿದ್ಧೇಶ್ವರ ನಗರದಲ್ಲಿರುವ ಮೃತ ಚೇತನ ರಕ್ಕಸಗಿ ಮನೆಗೆ ಭೇಟಿ ನೀಡಿದ ವೇಳೆ, ಇರುವ ಒಬ್ಬನೇ ಮಗನನ್ನು ಕಳೆದುಕೊಂಡಿದ್ದೇವೆ. ಎರಡನೇ ಮಗಳ ಮದುವೆ ತಯಾರಿಯಲ್ಲಿದ್ದ ನಮಗೆ ಮಗನ ಸಾವು ಬರಸಿಡಿಲು ಬಡದಂತಾಗಿದೆ ಎಂದು ಪೋಷಕರು ದುಃಖ ತೋಡಿಕೊಂಡರು.
ಕುಟುಂಬದವರಿಗೆ ಸಂತೈಸಿದ ಶಾಸಕರು, ಮನೆಗೆ ಆಸರೆಯಾಗಿದ್ದ ಮಗನ ಸಾವಾಗಿದ್ದು, ತೀರ ಅನ್ಯಾಯದ ಸಂಗತಿ. ಅದರಲ್ಲು ಕೊಲೆಯಂಥ ದುರ್ಘಟನೆ ಸಹಿಸಲು ಸಾಧ್ಯವೇ ಇಲ್ಲ. ಇನ್ನುಳಿದ ಹೆಣ್ಣುಮಕ್ಕಳ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಧೈರ್ಯ ತಂದುಕೊಳ್ಳಿ. ಸರ್ಕಾರದಿಂದ ಸಹಾಯಸ್ಥ ಕೊಡಿಸಲಾಗುವುದು ಎಂದು ಭರವಸೆ ನೀಡಿದ ಶಾಸಕ ಪ್ರಸಾದ ಅಬ್ಬಯ್ಯ ವೈಯಕ್ತಿಕವಾಗಿ 50ಸಾವಿರ ರೂ.ಗಳ ಆರ್ಥಿಕ ಸಹಾಯ ಮಾಡಿದರು.
ಇದೇ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಧುನಿಕ ಜಗತ್ತಿಗೆ ಮಾರು ಹೋಗಿರುವ ಯುವ ಪೀಳಿಗೆ ಇಂದು ಕೊಲೆ ಮಾಡುವ ಮಟ್ಟಕ್ಕೆ ಇಳಿದಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಸಿನೇಮಾ, ಸಾಮಾಜಿಕ ಜಾಲತಾಣ, ಕಾನೂನು ಬಾಹಿರ ಚಟುವಟಿಕೆಗಳ ಪ್ರಭಾವದಿಂದ ಇಂದು ಸಮಾಜದಲ್ಲಿ ಯುವಕರು ಸಣ್ಣ ವಯಸ್ಸಿನಲ್ಲೇ ಅಪರಾಧಿಕ ಕೃತ್ಯಗಳೆಡೆಗೆ ಆಕರ್ಷಣೆಯಾಗುತ್ತಿದ್ದಾರೆ. ಇದು ಬದಲಾವಣೆಯಾಗಬೇಕು. ಉತ್ತಮ ಸಂಸ್ಕಾರ ಬೆಳೆಸುವ ಕಾರ್ಯ ಆಗಬೇಕಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲರಿತೀಯ ಸಹಕಾರ ಸರ್ಕಾರದಿಂದ ಯಾವತ್ತೂ ಇದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.