ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತ ನಡುವಿನ IPL ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಹೀಗಾಗಿ ಉಭಯ ತಂಡಗಳ ನಡುವಿನ ಪಂದ್ಯ ಪಂದ್ಯ 5 ಓವರ್‌ಗಳ ಆಟಕ್ಕೆ ಸೀಮಿತವಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.
ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿದ್ದು ಪಂದ್ಯ ಇನ್ನೂ ಆರಂಭವಾಗಿಲ್ಲ. ಒಂದು ವೇಳೆ ಮಳೆ ಮುಂದುವರಿದರೆ ಓವರ್ ಕಡಿತವಾಗುತ್ತದೆ.
ರಾತ್ರಿ 8:45ಕ್ಕೆ ಪಂದ್ಯ ಆರಂಭವಾದರೆ ಓವರ್‌ನಲ್ಲಿ ಕಡಿತವಾಗುವುದಿಲ್ಲ. ನಂತರ ಪಂದ್ಯ ನಡೆದರೆ ಓವರ್ ಕಡಿತವಾಗುತ್ತದೆ. ರಾತ್ರಿ 10:56ರ ವರೆಗೆ ಪಂದ್ಯ ನಡೆಸಲು ಅವಕಾಶವಿದ್ದು ಕನಿಷ್ಠ 5 ಓವರ್ ಆದರೂ ಆಡಿಸಬಹುದು.
ರಾತ್ರಿ 10:50 ರ ನಂತರವೂ ಮಳೆ ಸುರಿದರೆ ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ. ಪಂದ್ಯ ರದ್ದುಗೊಂಡರೆ ಎರಡು ತಂಡಗಳಿಗೂ ಸಮಾನವಾಗಿ ಒಂದೊಂದು ಅಂಕ ನೀಡಲಾಗುತ್ತದೆ. ಹೀಗಾಗಿ ಆರ್‌ಸಿಬಿ 12 ಪಂದ್ಯಗಳಿಂದ 17 ಅಂಕ ಪಡೆದರೆ ಕೆಕೆಆರ್ 13 ಪಂದ್ಯವಾಡಿ 12 ಅಂಕ ಪಡೆಯುತ್ತದೆ. ಈ ಮೂಲಕ ಕೆಕೆಆರ್ ಟೂರ್ನಿಯಿಂದ ನಿರ್ಗಮಿಸುತ್ತದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಷ್ಟೇ ಮಳೆಯಾದರೂ, ಮಳೆ ನಿಂತ ನಂತರ ಕೆಲವೇ ನಿಮಿಷಗಳಲ್ಲಿ ಪಂದ್ಯಗಳು ಆರಂಭಿಸಬಹುದು. ಉದಾಹರಣೆಗೆ 1 ಗಂಟೆ ಭಾರೀ ಮಳೆ ಸುರಿದರೂ ಕೆಲವೇ ನಿಮಿಷಗಳಲ್ಲಿ ಪಂದ್ಯವನ್ನು ಆರಂಭಿಸಬಹುದು. ಕ್ರೀಡಾಂಗಣದಲ್ಲಿ ಸಬ್ ಏರ್ ಸಿಸ್ಟಂ ಅಳವಡಿಕೆಯಾಗಿದ್ದು ಕೂಡಲೇ ನೀರನ್ನು ಹೊರ ಹಾಕಲಾಗುತ್ತದೆ. ಬಿಸಿ ಗಾಳಿಯನ್ನು ಹಾಯಿಸಿ ಮೈದಾನವನ್ನ ಒಣಗಿಸುವ ವ್ಯವಸ್ಥೆಯಿದೆ. 4.5 ಕೋಟಿ ರೂ. ವೆಚ್ಚದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ.