ಆಂಧ್ರಪ್ರದೇಶ:- ಕಾರೊಂದು ನಿಯಂತ್ರಣ ತಪ್ಪಿ ಬಾವಿಗೆ ಬಿದ್ದು ಕರ್ನಾಟಕದ ಮೂವರು ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಬಾಲಂವರಿಪಲ್ಲಿ ಗ್ರಾಮದಲ್ಲಿ ಜರುಗಿದೆ.
ಚಿಂತಾಮಣಿ ಮೂಲದವರಾದ ಲೋಕೇಶ್, ಚಲಪತಿ ಮತ್ತು ಶಿವಣ್ಣ ಮೃತರು. ತಂಡುಪಲ್ಲಿಯ ಐವರು ಮದುವೆ ಸಮಾರಂಭಗಳಿಗೆ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದರು. ಹಾಗೆಯೇ ಶನಿವಾರ ತಮಿಳುನಾಡಿನ ಹೊಸೂರಿನಲ್ಲಿ ನಡೆದ ಮದುವೆಯಲ್ಲಿ ಕ್ಯಾಟರಿಂಗ್ ಕೆಲಸ ಮುಗಿಸಿ ಹಿಂತಿರುಗುತ್ತಿದ್ದಾಗ ಬಾಲಂವರಿಪಲ್ಲಿಯಲ್ಲಿ ಕಾರು ನಿಯಂತ್ರಣ ತಪ್ಪಿ ಬಾವಿಗೆ ಬಿದ್ದಿದೆ.
ಕಾರಿನಲ್ಲಿದ್ದ ಐದು ಪ್ರಯಾಣಿಕರಲ್ಲಿ ಕರ್ನಾಟಕದ ಮೂವರು ಮೃತಪಟ್ಟಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುನಿಲ್ ಹಾಗೂ ತಿಪ್ಪಾ ರೆಡ್ಡಿ ಕಾರಿನ ಹಿಂಭಾಗದ ಕಿಟಕಿಗಳನ್ನು ಒಡೆದು ಹೊರಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಕ್ರೇನ್ ಮೂಲಕ ಕಾರನ್ನು ಬಾವಿಯಿಂದ ಹೊರತೆಗೆದರು.