ಬೆಂಗಳೂರು: ಬೆಳಗಾವಿ ಅಧಿವೇಶನದ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಪದ ಬಳಕೆ ಪ್ರಕರಣ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ಅವಹೇಳನಕಾರಿ ಪದ ಬಳಕೆ ಪ್ರಕರಣ ಸಂಬಂಧ ಬಿಜೆಪಿ ಎಂಎಲ್ಸಿ ಸಿಟಿ ರವಿಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ ನೀಡಿದೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ ಆರೋಪದ ಮೇಲೆ ಬಿಜೆಪಿ ಶಾಸಕ ಸಿ.ಟಿ. ರವಿ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಿಟಿ ರವಿ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಈ 3 ರಾಶಿಯವರು ತಾಮ್ರದ ಉಂಗುರ ಧರಿಸುವುದರಿಂದ ಬದಲಾಗುತ್ತೆ ಅದೃಷ್ಟ: ಹಣದ ರಾಶಿಯೇ ಹರಿದು ಬರುತ್ತಂತೆ!
ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಎಂ. ಸುಂದ್ರೇಶ್ ಮತ್ತು ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರ ಸುಪ್ರೀಂಕೋರ್ಟ್ ಪೀಠ, ಸಿ.ಟಿ. ರವಿ ವಿರುದ್ಧ ವಿಚಾರಣಾ ಪ್ರಕ್ರಿಯೆಗಳಿಗೆ ತಡೆ ನೀಡಿ ಆದೇಶ ಹೊರಡಿಸಿದೆ.
ಪ್ರಕರಣ ಹಿನ್ನೆಲೆ
2024, ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಚರ್ಚೆ ವೇಳೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ಗೆ ಸಿಟಿ ರವಿ ಅವರು ಅವಾಚ್ಯ ಶಬ್ಧದಿಂದ ನಿಂದನೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಲಕ್ಷ್ಮೀ ಹೆಬ್ಬಾಳ್ಕರ್ ಸಿಟಿ ರವಿ ವಿರುದ್ಧ ಬೆಳಗಾವಿಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಸಿಟಿ ರವಿ ವಿರುದ್ಧ ಬಿಎನ್‌ಎಸ್ 2023 ರ ಸೆಕ್ಷನ್ 75, 79ಅಡಿಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಇದರ ಬೆನ್ನಲ್ಲೇ ಸಿಟಿ ರವಿ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಭಾರೀ ಸಂಚಲನ ಮೂಡಿಸಿತ್ತು. ಇನ್ನೇನು ಸಿಟಿ ರವಿ ಅವರನ್ನು ಕೋರ್ಟ್ಗೆ ಹಾಜರುಪಡಿಸಿಲು ಬೆಳಗಾವಿಯಿಂದ ಬೆಂಗಳೂರಿಗೆ ಕರೆದೊಯ್ಯುವ ಸಮಯದಲ್ಲೇ ಜಾಮೀನು ಸಿಕ್ಕಿತ್ತು.
ಬಳಿಕ ಸಿಟಿ ರವಿ ತಮ್ಮ ವಿರುದ್ಧದ ಈ ಪ್ರರಕಣ ರದ್ದು ಕೋರಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದ್ರೆ, ಹೈಕೋರ್ಟ್ ಸಿಟಿ ರವಿ ಅರ್ಜಿ ವಜಾಗೊಳಿಸಿತ್ತು. ಈ ಮೂಲಕ ಪ್ರಕರಣ ರದ್ದುಗೊಳಿಸಲು ನಿರಾಕರಿಸಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಸಿಟಿ ರವಿ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಇದೀಗ ಸುಪ್ರೀಂಕೋರ್ಟ್ ಪ್ರಕರಣದ ವಿಚಾರಣೆಗೆ ತಡೆ ನೀಡಿ ಆದೇಶಿಸಿದೆ.