ಮಂಡ್ಯ :- ಮದ್ದೂರು ತಾಲೂಕು ಕಚೇರಿ ಭ್ರಷ್ಟಾಚಾರದ ತವರೂರಾಗಿದೆ. ಇದರಿಂದ ರೈತರ ಹಾಗೂ ಸಾರ್ವಜನಿಕರ ಸರ್ಕಾರಿ ಕೆಲಸ ಮಾಡಿಸಿಕೊಳ್ಳಲು ಲಂಚ ನೀಡಬೇಕಾದ ದುಸ್ಥಿತಿ ಬಂದಿದೆ ಎಂದು ರೈತ ಸಂಘಟನೆಯ ವಿಭಾಗೀಯ ರಾಜ್ಯ ಉಪಾಧ್ಯಕ್ಷ ಬೋರಾಪುರ ಶಂಕರೇಗೌಡ ಗಂಭೀರವಾಗಿ ಆರೋಪಿಸಿದರು.
ಮದ್ದೂರು ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ತಹಸೀಲ್ದಾರ್ ಡಾ.ಸ್ಮಿತಾರಾಮು ಅವರ ಅಧ್ಯಕ್ಷತೆಯಲ್ಲಿ ನಡೆದ ರೈತರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ರೈತರ ಹಾಗೂ ಸಾರ್ವಜನಿಕರಿಗೆ ಜನಸ್ನೇಹಿಯಾಗಿ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸುವುದನ್ನು ಬಿಟ್ಟು, ಕೆಲ ಅಧಿಕಾರಿಗಳು ಲಂಚಾವತಾರದಲ್ಲಿ ಮುಳುಗಿರುವುದು ಬೇಸರದ ಸಂಗತಿಯಾಗಿದೆ ಎಂದರು.
ತಾಲೂಕು ಕಚೇರಿ, ತೋಟಗಾರಿಕೆ, ಕೃಷಿ ಇಲಾಖೆ ಸೇರಿದಂತೆ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ರೈತರು ಸವಲತ್ತುಗಳನ್ನು ಪಡೆದುಕೊಳ್ಳಬೇಕಾದರೆ ಕಚೇರಿಗಳಿಗೆ ಪ್ರತಿನಿತ್ಯ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಕಚೇರಿಯ ಕಂದಾಯ ಇಲಾಖೆಯಲ್ಲಿ ಸರ್ವೇ ಮಾಡಿಸಲು, ಆರ್.ಟಿ.ಸಿ.ತಿದ್ದುಪಡಿಗೆ ವರ್ಷಾನುಗಟ್ಟಲೆಯಿಂದ ರೈತರಿಗೆ ಆಗುತ್ತಿಲ್ಲ. ಇದರಿಂದ ರೈತರು ದೂರದ ಊರುಗಳಿಂದ ತಾಲೂಕು ಕಚೇರಿಗೆ ಅಲೆದು ಅಲೆದು ಸಾಕಾಗಿದೆ. ಇಷ್ಟಾದರು ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಕಾಲಹರಣ ಮಾಡುತ್ತಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದರು.
ಸರ್ವೆ ಇಲಾಖೆಯಲ್ಲಿ ರಿಯಲ್ ಎಸ್ಟೇಟ್ ಕುಳಗಳು ಬಂದರೆ ಹಣ ಪಡೆದು ಕ್ಷಣಮಾತ್ರದಲ್ಲಿ ಕೆಲಸ ಮಾಡುವ ಅಧಿಕಾರಿಗಳು ರೈತರ ಕೆಲಸಗಳನ್ನು ಮಾಡಲು ವರ್ಷಾನುಗಟ್ಟಲೆ ತೆಗೆದುಕೊಳ್ಳುತ್ತಿದ್ದಾರೆ.
ತಾಲೂಕು ಕಚೇರಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಭ್ರಷ್ಟಾಚಾರ, ಲಂಚಾವತಾರವನ್ನು ಖಂಡಿಸಿ ರೈತ ಸಂಘದ ವತಿಯಿಂದ ಈ ಹಿಂದೆ ಹಲವಾರು ಬಾರಿ ತಾಲೂಕು ಕಚೇರಿ ಎದುರು ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದ್ದರು. ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸದೆ ಹೋದರೆ ರೈತ ಸಂಘದ ವತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಸಭೆಯಲ್ಲಿ ಎಚ್ಚರಿಕೆ ನೀಡಿದರು.
ರೈತ ಮುಖಂಡ ಲಿಂಗಪ್ಪಾಜಿ ಮಾತನಾಡಿ, ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿಮೀರಿದ್ದು, ಇಂತಿಷ್ಟು ಹಣ ನೀಡಿದರೆ ಎಲ್ಲಾ ದಾಖಲಾತಿಗಳನ್ನು ನೀಡುವ ಕೆಲ ಅಧಿಕಾರಿಗಳು. ರೈತರು ಹಾಗೂ ಸಾರ್ವಜನಿಕರು ಕೇಳಿದರೆ ಯಾವುದೇ ದಾಖಲಾತಿಗಳು ಇಲ್ಲವೆಂದು ಇಲ್ಲ ಸಲ್ಲದ ಸಬೂಬು ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಯಾವುದೇ ಅಧಿಕಾರಿಗಳು ಗುರುತಿನ ಚೀಟಿ ಹಾಕಿಕೊಳ್ಳುತ್ತಿಲ್ಲ ಇದರಿಂದ ಪ್ರತಿಯೊಬ್ಬರು ಗುರುತಿನ ಚೀಟಿ ಹಾಕಿಕೊಳ್ಳುವಂತೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ತಾಕೀತು ಮಾಡಬೇಕು ಎಂದರು.
ಗ್ರಾಮಾಂತರ ಪ್ರದೇಶಗಳಲ್ಲಿ ಜಲ ಜೀವನ್ ಮೀಷನ್ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ. ಕೆಲವು ಕಡೆಗಳಲ್ಲಿ ನೀರು ಕಾಲುವೆಗಳು ಒತ್ತುವರಿಯಾಗಿದೆ ಹಾಗೂ ನಾಲೆಗಳಲ್ಲಿ ಗಿಡಗಂಟಿಗಳು ಬೆಳೆದುಕೊಂಡು ನೀರು ಸಮರ್ಪಕವಾಗಿ ರೈತರ ಜಮೀನುಗಳಿಗೆ ಹೋಗುತ್ತಿಲ್ಲ ಈ ರೀತಿಯ ಹಲವಾರು ಸಮಸ್ಯೆಗಳಿದ್ದು ಅಧಿಕಾರಿಗಳು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ಒತ್ತಾಯ ಮಾಡಿದರು.
ರೈತ ಮಖಂಡ ವೀರಪ್ಪ ಮಾತನಾಡಿ, ಮುಂದಿನ ತಿಂಗಳಲ್ಲಿ ಶಾಲಾ, ಕಾಲೇಜುಗಳು ಪ್ರಾರಂಭಗೊಳ್ಳುತ್ತಿದ್ದು ವಿದ್ಯಾರ್ಥಿಗಳಿಗೆ ಯಾವುದೇ ರೀತಿ ತೊಂದರೆ ಉಂಟಾಗದಂತೆ ನಿಗದಿತ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಸಕಾಲದಲ್ಲಿ ನೀಡುವಂತೆ ಮತ್ತು ಗ್ರಾಮ ಲೆಕ್ಕಿಗರು ಹಾಗೂ ರಾಜಸ್ವ ನಿರೀಕ್ಷಕರು ಕರ್ತವ್ಯ ನಿರತ ಸ್ಥಳದಲ್ಲಿ ಹಾಜರಿದ್ದು ಯಾವುದೇ ತೊಡಕುಂಟಾಗದಂತೆ ಅಗತ್ಯ ಕ್ರಮವಸಬೇಕೆಂದರು.
ರೈತರ ಸಮಸ್ಯೆಗಳನ್ನು ಆಲಿಸಿದ ತಹಸೀಲ್ದಾರ್ ಡಾ.ಸ್ಮಿತಾರಾಮು ಮಾತನಾಡಿ, ತಾಲೂಕು ಕಚೇರಿ ಸೇರಿದಂತೆ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳನ್ನು ಮಾಡಿಕೊಡಲು ಒಂದು ವೇಳೆ ಅಧಿಕಾರಿಗಳು ಹಣ ಕೇಳಿದರೆ ನನ್ನ ಗಮನಕ್ಕೆ ತಂದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಾನು ತಹಸೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡ 8 ತಿಂಗಳ ಅವದಿಯಲ್ಲಿ ಪಾರದರ್ಶಕವಾಗಿ ಕೆಲಸ ಮಾಡುವ ಜತೆಗೆ ಜನಸ್ನೇಹಿಯಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. 14,700 ಅರ್ಜಿಗಳು ಬಂದಿದ್ದು ಈ ಪೈಕಿ 14600 ಅರ್ಜಿಗಳನ್ನು ವಿಲೇವಾರಿ ಮಾಡುವುದರ ಮೂಲಕ ಸಾರ್ವಜನಿಕ ಕೆಲಸ ಕಾರ್ಯಗಳನ್ನು ತ್ವರಿತಗತಿಯಲ್ಲಿ ಮಾಡಿದ್ದೇನೆ ಎಂದರು.
ರೈತರು ನನಗೆ ನೀಡಿರುವ ಹಲವಾರು ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವ ಜತೆಗೆ ನಾಲೆ ಒತ್ತುವರಿ, ತೆಂಗಿಗೆ ನುಸಿಪೀಡೆ ರೋಗ ಇನ್ನಿತರ ಹಲವು ಸಮಸ್ಯೆಗಳನ್ನು ತ್ವರಿತ ಗತಿಯಲ್ಲಿ ಬಗೆ ಹರಿಸುವ ಬಗ್ಗೆ ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ತಾಪಂ ಇಓ ರಾಮಲಿಂಗಯ್ಯ, ರೈತ ಮುಖಂಡರಾದ ಲಿಂಗಪ್ಪಾಜಿ, ವರದರಾಜು, ಸಿದ್ದೇಗೌಡ, ರವಿಕುಮಾರ್, ಕೃಷ್ಣೇಗೌಡ, ಗೊಲ್ಲರದೊಡ್ಡಿ ಅಶೋಕ್, ವಿನೋದ್ ಬಾಬು, ವೆಂಕಟೇಶ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ