ಬೆಂಗಳೂರು: ಕರ್ನಾಟಕದಲ್ಲಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದ 16 ಜಿಲ್ಲಾ ಆಸ್ಪತ್ರೆಗಳಲ್ಲಿ ಕೀಮೋಥೆರಪಿ ಕೇಂದ್ರಗಳನ್ನು ಆರಂಭಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ ಎಂದು ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ವಿಕಾಸಸೌಧದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಘೋಷಣೆ ಮಾಡಿದ್ದಾರೆ.
ಸಚಿವ ದಿನೇಶ್ ಗುಂಡೂರಾವ್ ಅವರು, ಕರ್ನಾಟಕದಲ್ಲಿ ಪ್ರತಿ ವರ್ಷ ಸುಮಾರು 70,000 ಹೊಸ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿವೆ. ಆದರೆ, ರಾಜ್ಯದ ಎಲ್ಲಾ ಕಡೆಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಅಗತ್ಯವಾದ ಸೌಲಭ್ಯಗಳು ಲಭ್ಯವಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ರೋಗಿಗಳಿಗೆ ದೊಡ್ಡ ಮೊತ್ತದ ಹಣ ವೆಚ್ಚವಾಗುತ್ತದೆ, ಇದು ಸಾಮಾನ್ಯ ಜನರಿಗೆ ಸ್ವಲ್ಪ ಮಟ್ಟಿಗೆ ಕಷ್ಟವಾಗುತ್ತದೆ. ಸುಮಾರು 60% ರಷ್ಟು ರೋಗಿಗಳು ಕ್ಯಾನ್ಸರ್ ಚಿಕಿತ್ಸೆಗಾಗಿ 100 ಕಿಲೋಮೀಟರ್ಗಿಂತಲೂ ಹೆಚ್ಚು ದೂರ ಪ್ರಯಾಣಿಸಬೇಕಾಗಿದೆ, ಇದರಿಂದ ಆರ್ಥಿಕ ಹೊರೆಯ ಜೊತೆಗೆ ದೈಹಿಕ ಮತ್ತು ಮಾನಸಿಕ ತೊಂದರೆಯೂ ಉಂಟಾಗುತ್ತದೆ. ಈ ಎಲ್ಲಾ ಕಾರಣಗಳಿಗಾಗಿ ಇದೀಗ ಆರೋಗ್ಯ ಇಲಾಖೆ ಕ್ಯಾನ್ಸರ್ ರೋಗಿಗಳಿಗೆ ಹೊಸ ಕ್ರಮವನ್ನು ಜಾರಿಗೆ ತರಲು ನಿರ್ಧರಿಸಿದೆ.
ಎಲ್ಲೆಲ್ಲಿ ಕೀಮೋಥೆರಪಿ ಕೇಂದ್ರಗಳ ಆರಂಭ?
1. ವಿಜಯಪುರ
2. ಉಡುಪಿ
3. ಬಳ್ಳಾರಿ
4. ಧಾರವಾಡ
5. ಚಿತ್ರದುರ್ಗ
6. ವಿಜಯನಗರ
7. ಹಾವೇರಿ
8. ಬೆಂಗಳೂರು ಗ್ರಾಮಾಂತರ
9. ರಾಮನಗರ
10. ಬೆಂಗಳೂರು ನಗರ
11. ದಕ್ಷಿಣ ಕನ್ನಡ
12. ಮೈಸೂರು
13. ದಾವಣಗೆರೆ
14. ತುಮಕೂರು
15. ಕೋಲಾರ
16. ಬಾಗಲಕೋಟೆ
“ಕ್ಯಾನ್ಸರ್ ರೋಗಿಗಳಿಗೆ ಸ್ಥಳೀಯವಾಗಿ ಚಿಕಿತ್ಸೆ ಒದಗಿಸುವುದು ನಮ್ಮ ಆದ್ಯತೆಯಾಗಿದೆ. ಈ ಕೀಮೋಥೆರಪಿ ಕೇಂದ್ರಗಳ ಮೂಲಕ ರೋಗಿಗಳ ಆರ್ಥಿಕ ಮತ್ತು ದೈಹಿಕ ಒತ್ತಡವನ್ನು ಕಡಿಮೆ ಮಾಡಲು ನಾವು ಬದ್ಧರಾಗಿದ್ದೇವೆ. ಈ ಉಪಕ್ರಮವು ಕರ್ನಾಟಕದ ಆರೋಗ್ಯ ವ್ಯವಸ್ಥೆಯಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ,” ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.