ಬೆಂಗಳೂರು:- ಕರ್ನಾಟಕ ಸೇರಿ ದೇಶದಾದ್ಯಂತ ಕೊರೊನಾ ಸೋಂಕು ಮತ್ತೆ ಹೆಚ್ಚಾಗುತ್ತಿದ್ದು, ಆತಂಕ ಮನೆ ಮಾಡಿದೆ. ರಾಜ್ಯದಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಆರೋಗ್ಯ ಸಚಿವರಿಗೆ ಸೂಚನೆ ನೀಡಿದ್ದಾರೆ. ಆರೋಗ್ಯ ಸಚಿವರ ಜೊತೆ ಮಾತುಕತೆ ನಡೆಸಿರುವ ಸಿಎಂ ಸಿದ್ದರಾಮಯ್ಯ, ಯಾವುದೇ ಕ್ರಮ ತೆಗೆದುಕೊಳ್ಳುವುದಕ್ಕೂ ಹಿಂದೇಟು ಹಾಕಬೇಡಿ. ಏನೇ ಕ್ರಮ ತೆಗೆದುಕೊಳ್ಳಬೇಕೆಂದರೂ ತಜ್ಞರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಿ ಎಂದು ಸೂಚಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಹುಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ 84 ವರ್ಷದ ಕೊರೊನಾ ಸೋಂಕಿತ ವೃದ್ಧರೊಬ್ಬರು ಶನಿವಾರ ಬೆಂಗಳೂರಿನಲ್ಲಿ ಮೃತಪಟ್ಟಿದ್ದರು. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ. ಬೆಂಗಳೂರಿನ ಮಲ್ಲೇಶ್ವರಂ ಮತ್ತು ರಾಜಾಜಿನಗರದಲ್ಲಿ ಮತ್ತಿಬ್ಬರಿಗೆ ಕೊರೊನಾ ಸೋಂಕು ತಗುಲಿದೆ.
ಮುಂದಿನ ವಾರ ಮೇ.29ರಿಂದ ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಪುನಾರಂಭವಾಗುತ್ತವೆ. ಮಕ್ಕಳನ್ನು ಶಾಲೆಗೆ ಕಳುಹಿಸುವುದು ಹೇಗೆ ಅಂತ ಪೋಷಕರು ಆತಂಕಗೊಂಡಿದ್ದಾರೆ. ಮಕ್ಕಳಿಗೆ ಮಾಸ್ಕ್ ಧರಿಸಿ ಶಾಲೆಗೆ ಕಳುಹಿಸುವಂತೆ ಪೋಷಕರಿಗೆ ಶಾಲೆಗಳ ಆಡಳಿತ ಮಂಡಳಿ ಸೂಚನೆ ನೀಡುತ್ತಿವೆ. ಶಾಲಾ-ಕಾಲೇಜು ಸಿಬ್ಬಂದಿಗೂ ಮಾಸ್ಕ್ ಕಡ್ಡಾಯ ಮಾಡಲಾಗಿದೆ.
ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಮೇ 29 ರಿಂದ ಶಾಲಾ-ಕಾಲೇಜುಗಳು ಮರು ಆರಂಭವಾಗುತ್ತಿವೆ. ಪರೀಕ್ಷಾ ಕಿಟ್‌ಗಳ ಕೊರತೆಯಿದೆ. ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜನರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಸರ್ಕಾರ ತಿಳಿಸಿದೆ. ಮಕ್ಕಳು ಮತ್ತು ವಯಸ್ಸಾದವರಲ್ಲಿ ಲಕ್ಷಣಗಳು ಕಂಡುಬಂದರೆ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಭಾನುವಾರದಿಂದಲೇ ಕೊರೊನಾ ಟೆಸ್ಟ್ ಶುರುವಾಗುತ್ತೆ ಅಂತ ಹೇಳಲಾಗಿತ್ತು. ಆದರೆ, ಬೆಂಗಳೂರಿನ ಆಸ್ಪತ್ರಗೆಳಲ್ಲಿ ಟೆಸ್ಟ್ ಕಿಟ್ ಕೊರತೆ ಇದೆ. ಬಿಬಿಎಂಪಿ, ಸರ್ಕಾರಿ ಆಸ್ಪತ್ರಗೆಳಲ್ಲಿ ಟೆಸ್ಟ್ ಕಿಟ್‌ಗಳಿಲ್ಲ. ಕಿಟ್ ಬಂದ ಬಳಿಕ ಪರೀಕ್ಷೆ ಆರಂಭಿಸುತ್ತೇವೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ.
ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು, ನಾಳೆ, ನಾಡಿದ್ದು ಆಸ್ಪತ್ರೆಗಳಿಗೆ ಕೊರೊನಾ ಟೆಸ್ಟಿಂಗ್ ಕಿಟ್ಗಳು ತಲುಪಲಿವೆ. ವಿಶೇಷವಾಗಿ ತೀವ್ರ ಉಸಿರಾಟ ಸಮಸ್ಯೆ ಇರುವವರಿಗೆ ಕಡ್ಡಾಯವಾಗಿ ಟೆಸ್ಟ್ ಮಾಡಬೇಕು ಎಂದು ಸೂಚನೆ ನೀಡಿದ್ದೇನೆ. ವಯೋವೃದ್ಧರಿಗೆ ಮತ್ತು ಮಕ್ಕಳಲ್ಲಿ ಮೈಕೈ ನೋವು, ನೆಗಡಿ, ಜ್ವರದಂತಹ ಲಕ್ಷಣಗಳು ಕಂಡುಬಂದರೇ ಕೊರೊನಾ ಟೆಸ್ಟ್ ಮಾಡಿಸಿ ಎಂದು ಹೇಳಿದರು.