ಹಾವೇರಿ: ದೇಶದಲ್ಲಿ ಸೈಬರ್ ದರೋಡೆಕೋರರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೋಸ ಮಾಡಲು ಒಂದಲ್ಲ ಒಂದು ಹೊಸ ಮಾರ್ಗಗಳನ್ನು ಕಂಡುಹಿಡಿಯುತ್ತಿದ್ದಾರೆ. ಅನಾಮಿಕರ ಮಾತು ನಂಬಿ ಒಟಿಪಿ ನಂಬರ್ ಹೇಳುತ್ತಿದ್ದಂತೆ ಬ್ಯಾಂಕ್ ಖಾತೆಯಲ್ಲಿದ್ದ ಹಣ ಮಂಗ ಮಾಯವಾದ ಸುದ್ದಿ ಹರಿದಾಡುತ್ತಲೇ ಇದೆ. ಇದೀಗ ಹಾವೇರಿ ಜಿಲ್ಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರಿನಲ್ಲಿ ಸೈಬರ್ ಕಳ್ಳರು ಕೋಟ್ಯಂತರ ರೂ. ವಂಚನೆ ಮಾಡಿರುವ ಘಟನೆ ನಡೆದಿದೆ.
ನೀವು ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ತಿನ್ನುತ್ತೀರಾ!? ಹಾಗಿದ್ರೆ ಈ ಸುದ್ದಿ ನೋಡಿ!
ಜಿಲ್ಲೆಯ 15ಕ್ಕೂ ಅಧಿಕ ಜನರು ವಂಚನೆಗೆ ಒಳಗಾಗಿದ್ದು, ಬೆಂಗಳೂರು, ಮಂಗಳೂರು, ತುಮಕೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸೈಬರ್ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಸೈಬರ್ ಕಳ್ಳರು ಸಾಮಾಜಿಕ ಜಾಲತಾಣಗಳಲ್ಲಿ ಟ್ರಂಪ್ ಕುರಿತು ಜಾಹೀರಾತು ಒಂದನ್ನು ಹರಿಬಿಟ್ಟು, ಆ್ಯಪ್ ಕುರಿತು ಮಾಹಿತಿ ಹಂಚಿಕೊಂಡಿದ್ದರು. ಜಾಹೀರಾತಿನಲ್ಲಿ ನೀಡಿದ ನಂಬರ್‌ಗೆ ಕರೆ ಮಾಡಿದರೆ, ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಕೆ ಮಾಡಬಹುದು ಎಂದು ಆಮಿಷ ಒಡ್ಡಿದ್ದರು. ಇದನ್ನು ನಂಬಿದ್ದ ಹಲವಾರು ಜನರು ಜಾಹೀರಾತಿನಲ್ಲಿ ನೀಡಿದ್ದ ನಂಬರ್‌ಗೆ ಕರೆ ಮಾಡಿ, ವಂಚನೆಗೆ ಒಳಗಾಗಿದ್ದಾರೆ.
ಆರಂಭದಲ್ಲಿ ಜನರನ್ನು ನಂಬಿಸುವ ಉದ್ದೇಶದಿಂದ ಟ್ರಂಪ್‌ಗೆ ಹಣ ಹಾಕಿದವರಿಗೆ ದುಪ್ಪಟ್ಟು ಹಣ ಹಾಗೂ ಬಡ್ಡಿ ಹಣ ನೀಡುತ್ತೇವೆ ಎಂದು ಹೇಳಿ ಹಣವನ್ನು ನೀಡಿದ್ದಾರೆ. ಬಳಿಕ ಜನರು ಹೆಚ್ಚಿನ ಲಾಭದ ಆಸೆಗೆ ಬಿದ್ದು, ಹೆಚ್ಚು ಹಣ ಹಾಕಲು ಆರಂಭಿಸಿದರು. ಜನರು ಹಣ ಜಾಸ್ತಿ ಹಾಕಲು ಪ್ರಾರಂಭಿಸಿದ್ದೇ ತಡ ಸೈಬರ್ ಕಳ್ಳರು ಆ್ಯಪ್ ಲಾಕ್ ಮಾಡಿದ್ದಾರೆ. ವ್ಯಾಪಾರಸ್ಥರು, ವಕೀಲರು, ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಸೇರಿದಂತೆ ಹಲವರಿಗೆ ಸೈಬರ್ ವಂಚಕರು ವಂಚಿಸಿದ್ದಾರೆ. ಕೆಲವು ದೂರು ಕೊಡಲು ಕೂಡ ಹಿಂದೇಟು ಹಾಕಿದ್ದಾರೆ.