ಅಕ್ರಮ ಗಣಿಗಾರಿಕೆ ಮತ್ತು ರಪ್ತು ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ 7 ವರ್ಷ ಶಿಕ್ಷೆಗೆ ಗುರಿಯಾಗಿರುವ ಜನಾರ್ಧನ ರೆಡ್ಡಿ ಅವರನ್ನು ಚಂಚಲಗುಡ ಜೈಲಿನಿಂದ ಬೆಂಗಳೂರು ಜೈಲಿಗೆ ಶಿಫ್ಟ್ ಮಾಡಲಾಗಿದೆ. ಇಂದು ಬಾಡಿ ವಾರಂಟ್ ಮೇಲೆ ರೆಡ್ಡಿಯನ್ನು ಹೈದರಾಬಾದ್ ಪೊಲೀಸರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ವಿಚಾರಣೆ ನಡೆಸಿದ ನ್ಯಾ. ಸಂತೋಷ್ ಗಜಾನನ್ ಭಟ್ ಅವರು ಜನಾರ್ದನ ರೆಡ್ಡಿ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರ ಮಾಡುವಂತೆ ಆದೇಶ ಪ್ರಕಟಿಸಿ ಮುಂದಿನ ವಿಚಾರಣೆಯನ್ನು ಜೂನ್ 2ಕ್ಕೆ ಮುಂದೂಡಿಕೆ ಮಾಡಿದರು.
ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಅವರನ್ನು ಸಿಬಿಐ ನ್ಯಾಯಾಲಯ ದೋಷಿಯೆಂದು ಘೋಷಿಸಿ, ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ತೀರ್ಪು ಮೇ 06, 2025 ರಂದು ಪ್ರಕಟಗೊಂಡಿತ್ತು. ಪ್ರಕರಣವು ಬಳ್ಳಾರಿ ಜಿಲ್ಲೆಯ ಓಬಳಾಪುರಂ ಗಣಿಗಾರಿಕೆಯಲ್ಲಿ ನಡೆದಿದ್ದ ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದ್ದು, ರೆಡ್ಡಿ ಅವರ ವಿರುದ್ಧ ಭ್ರಷ್ಟಾಚಾರ ಮತ್ತು ಗಣಿಗಾರಿಕೆ ನಿಯಮಗಳ ಉಲ್ಲಂಘನೆಯ ಆರೋಪಗಳು ಹೊರಿಸಲಾಗಿತ್ತು.
ಏನಿದು ಪ್ರಕರಣ?
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ಧನ ರೆಡ್ಡಿ ಮೇಲಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸಿಬಿಐ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಶಿಕ್ಷೆ ವಿಧಿಸಿದ ನಂತರ ಪೊಲೀಸರು ರೆಡ್ಡಿಯನ್ನು ಬಂಧಿಸಿ ಚಂಚಲಗೂಡ ಜೈಲಿಗೆ ಶಿಫ್ಟ್ ಮಾಡಿದ್ದರು. ಈ ಮೂಲಕ 10 ವರ್ಷಗಳ ಬಳಿಕ ಮತ್ತೆ ಜನಾರ್ದನ ರೆಡ್ಡಿ ಜೈಲುಪಾಲಾಗಿದ್ದಾರೆ.
ಹೈದರಾಬಾದ್‌ನ ನಾಂಪಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಒಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿತ್ತು. ರೆಡ್ಡಿ ಜತೆಗೆ ಒಎಂಸಿ ಕಪನಿ ವ್ಯವಸ್ಥಾಪಕ ನಿರ್ದೇಶಕ ಬಿ.ವಿ.ಶ್ರೀನಿವಾಸ ರೆಡ್ಡಿ, ರೆಡ್ಡಿ ಆಪ್ತ ಎಂ.ಅಲಿಖಾನ್, ಗಣಿ ಇಲಾಖೆ ಮಾಜಿ ಅಧಿಕಾರಿ ವಿ.ಡಿ.ರಾಜಗೋಪಾಲ್ ದೋಷಿಗಳು ಎಂದು ಹೇಳಿದೆ. ಕೋರ್ಟ್ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ, 10 ಲಕ್ಷ ರೂ. ದಂಡ ಹಾಗೂ ಒಎಂಸಿ ಗಣಿ ಕಂಪನಿಗೆ 2 ಲಕ್ಷ ರೂ. ದಂಡ ವಿಧಿಸಿದೆ.