ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಪ್ರಾರಂಭವಾಗಲಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಮಾಹಿತಿ ನೀಡಿದ್ದಾರೆ. ಇತ್ತೀಚೆಗಷ್ಟೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಟೋಯಿಂಗ್ ಬಗ್ಗೆ ಆರಂಭಿಸುವುದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಇಂದು ಟೋಯಿಂಗ್ ಪ್ರಾರಂಭಿಸುವ ಬಗ್ಗೆ ಪರಮೇಶ್ವರ್ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದ್ದು, ಇದನ್ನು ಕಡಿವಾಣ ಹಾಕಲು ಟೋಯಿಂಗ್ ಶುರು ಮಾಡಲಾಗುತ್ತಿದೆ ಎಂದಿದ್ದಾರೆ.
ಬೆಂಗಳೂರಿನ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಾತನಾಡಿದ ಪರಮೇಶ್ವರ್, ಈ ಹಿಂದೆ ಟೋಯಿಂಗ್ ನಿಲ್ಲಿಸಿದ್ದೇವು. ಅದನ್ನ ರೀ ಇಂಟ್ರಡ್ಯೂಸ್ ಮಾಡ್ತೀವಿ. ಮೊದಲು ಬಾಡಿಗೆ ವೆಹಿಕಲ್ ಗಳನ್ನ ತೆಗೆದುಕೊಳ್ತಿದ್ವಿ. ಈಗ ನಮ್ಮದೇ ವೆಹಿಕಲ್, ನಮ್ಮದೇ ಸಿಬ್ಬಂದಿಯಿಂದ ಅದನ್ನ ಹ್ಯಾಂಡಲ್ ಮಾಡ್ತೀವಿ. ಈ ಬಗ್ಗೆ ಇವತ್ತಿನ ಸಭೆಯಲ್ಲಿ ನಿರ್ಧಾರ ಮಾಡಿದ್ದೇವೆ ಎಂದು ಹೇಳಿದ್ದಾರೆ.
3 ವರ್ಷದ ಬಳಿಕ ಮತ್ತೆ ಟೋಯಿಂಗ್!
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಗೃಹ ಸಚಿವರಾಗಿದ್ದ ಆರಗ ಜ್ಞಾನೇಂದ್ರ ಕಾಲಾವಧಿಯಲ್ಲಿ ಟೋಯಿಂಗ್ ಆರಂಭಿಸಲಾಗಿತ್ತು. ಈ ವೇಳೆ ಸಾರ್ವಜನಿಕರಿಂದ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಬಳಿಕ ನಿಲ್ಲಿಸಿದ್ದ ಸರ್ಕಾರ ಇದೀಗ ಮೂರು ವರ್ಷದ ಬಳಿಕ ಮತ್ತೆ ಟೋಯಿಂಗ್ ಆರಂಭಿಸುವುದಾಗಿ ಹೇಳಿದೆ.