ಬೆಂಗಳೂರು:- ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಪೊಲೀಸರು ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ.
ಚಿನ್ನಸ್ವಾಮಿ ಕಾಲ್ತುಳಿತ ಕೇಸ್: ರಾತ್ರೋ-ರಾತ್ರಿ ಓರ್ವ ಅರೆಸ್ಟ್.. ತನಿಖೆ ಚುರುಕು!
ಸಿದ್ದರಾಮಯ್ಯ ಅವರು ಸೂಚನೆ ನೀಡಿದ ಬೆನ್ನಲ್ಲೇ ಡಿಎನ್ಎ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ಮೂವರು ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ನ ಓಬ್ಬರು ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಡಿಎನ್ಎ ಇವೆಂಟ್ ಮ್ಯಾನೇಜ್ಮೆಂಟ್ನ ಸುನೀಲ್ ಮ್ಯಾಥ್ಯೂ, ಕಿರಣ್ ಮತ್ತು ವಿನೋದ್, ಕೆಎಸ್ಸಿಎ ಪ್ರತಿನಿಧಿ ಹೆಸರು ಬಹಿರಂಗಪಡಿಸಿಲ್ಲ.
ಇನ್ನೂ ಕೆಎಸ್ಸಿಎ ಪ್ರಮುಖರೆಲ್ಲಾ ನಿನ್ನೆ ರಾತ್ರಿಯೇ ಎಸ್ಕೇಪ್ ಆಗಿದ್ದು, ಅವರ ಮನೆಗಳಿಗೂ ತೆರಳಿ ಪೊಲೀಸರು ಹುಡುಕಾಟ ನಡೆಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಘಟನೆ ವಿವರ:
ರಾಯಲ್ ಚಾಲೆಂಜರ್ಸ್ ಬೆಂಗಳೂರು 18 ವರ್ಷಗಳ ಬಳಿಕ ಐಪಿಎಲ್ ಚಾಂಪಿಯನ್ ಪಟ್ಟವನ್ನೇನೋ ಅಲಂಕರಿಸಿದೆ. ಆದರೆ, ಆರ್ಸಿಬಿ ಫ್ಯಾನ್ಸ್ ಐತಿಹಾಸಿಕ ಕ್ಷಣದ ಸಂಭ್ರಮದಲ್ಲಿ ದುರಂತ ಸಂಭವಿಸಿದೆ. 10ಕ್ಕೂ ಹೆಚ್ಚು ಅಭಿಮಾನಿಗಳು ಸಾವನ್ನಪ್ಪಿ ಸೂತಕವಾಗಿ ಆಗಿಬಿಟ್ಟಿದೆ. ಪಂಜಾಬ್ ವಿರುದ್ಧ ಬೆಂಗಳೂರು 6 ರನ್ಗಳ ಭರ್ಜರಿ ಜಯ ಸಾಧಿಸ್ತಿದ್ದಂತೆಯೇ ಸಿಲಿಕಾನ್ ಸಿಟಿಯಲ್ಲಿ ನಿನ್ನೆ ರಾತ್ರಿಯೇ ದೀಪಾವಳಿಯಂಥಹ ಸಂಭ್ರಮ ಇತ್ತು.
ದಿಢೀರನೆ ಜೂನ್ 4 ರಂದು ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರಿಂದ ಅಭಿಮಾನಿಗಳ ಸುನಾಮಿಯೇ ಸೃಷ್ಟಿ ಆಯ್ತು… ಉಚಿತ ಪ್ರವೇಶ ಆಗಿದ್ದರಿಂದ ಕ್ರೀಡಾಂಗಣಕ್ಕೆ ಫ್ಯಾನ್ಸ್ ಹರಿದುಬಂದಿತ್ತು. ಗೇಟ್ ನಂಬರ್ 18, 19, 20ರ ಬಳಿ ಅಭಿಮಾನಿ ಸಾಗರ ತಡೆಯಲು ಪೊಲೀಸರು ಹೈರಾಣಾಗಿ ಹೋದರು. ಒಂದು ಹಂತದಲ್ಲಿ ಲಾಠಿಯನ್ನೂ ಬೀಸಿದರು. ಕ್ಷಣ ಕ್ಷಣಕ್ಕೂ ಆರ್ಸಿಬಿ ಅಭಿಮಾನಿಗಳ ಸುನಾಮಿ ಹೆಚ್ಚುತ್ತಲೇ ಇತ್ತು. ಆದರೆ, ಗೇಟ್ ನಂ.12ರ ಬಳಿ ಗೇಟ್ ತೆಗೆಯುತ್ತಿದ್ದಂತೆಯೇ ಭಾರೀ ಪ್ರಮಾಣದಲ್ಲಿ ನೂಕು ನುಗ್ಗಲು ನಡೀತು. ಒಬ್ಬರ ಮೇಲೋಬ್ಬರು ಬಿದ್ದರು, ಉಸಿರಾಡೋಕೂ ಕೂಡ ಸಾಧ್ಯವಾಗಲಿಲ್ಲ. ತಕ್ಷಣವೇ ಹತ್ತಿರದ ಬೌರಿಂಗ್ ಆಸ್ಪತ್ರೆ, ವೈದೇಹಿ ಆಸ್ಪತ್ರೆ (ಮಲ್ಯ ರಸ್ತ್ರೆ), ಮಣಿಪಾಲ್ಗೆ ದಾಖಲಿಸಲಾಯಿತು. ಆದರೆ, ಬೌರಿಂಗ್ ಆಸ್ಪತ್ರೆಯಲ್ಲಿ 6, ವೈದೇಹಿ ಆಸ್ಪತ್ರೆಯಲ್ಲಿ 4 ಹಾಗೂ ಮಣಿಪಾಲ ಆಸ್ಪತ್ರೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.