ಟೆಸ್ಟ್ ಗೆಲ್ಲಲು ಬ್ಯಾಟಿಂಗ್ ಕ್ರಮಾಂಕ ಬದಲಿಸಲು ನಾನು ಸಿದ್ಧ ಎಂದು ನೂತನ ಟೆಸ್ಟ್ ನಾಯಕ ಶುಭ್ಮನ್ ಗಿಲ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 20 ವಿಕೆಟ್ಗಳನ್ನು ಪಡೆಯದೆ ನೀವು ಟೆಸ್ಟ್ ಪಂದ್ಯವನ್ನು ಗೆಲ್ಲಲು ಸಾಧ್ಯವಿಲ್ಲ. ಹೀಗಾಗಿ ನಾವು ಬೌಲಿಂಗ್ ವಿಭಾಗವನ್ನು ಬಲಪಡಿಸಲು ನೋಡುತ್ತಿದ್ದೇವೆ. ಅಂದರೆ, 20 ವಿಕೆಟ್ಗಳನ್ನು ಪಡೆಯಲು ನಾವು ಬ್ಯಾಟಿಂಗ್ ವಿಭಾಗವನ್ನು ಕಡಿಮೆ ಮಾಡಲು ಸಿದ್ಧ. ಅಗತ್ಯವಿದ್ದರೆ ಬ್ಯಾಟಿಂಗ್ ಆಲ್ರೌಂಡರ್ ಬದಲಿಗೆ ಪೂರ್ಣ ಪ್ರಮಾಣದ ಬೌಲರ್ ಅನ್ನು ಆಯ್ಕೆ ಮಾಡಲು ಸಿದ್ಧ ಎಂದು ಗಿಲ್ ಸ್ಪಷ್ಟಪಡಿಸಿದರು.
ಟೆಸ್ಟ್ ಸರಣಿಯ ಮಹತ್ವದ ಕುರಿತು ಮಾತನಾಡಿದ ಗಿಲ್, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ ಟೆಸ್ಟ್ ಸರಣಿ ಗೆಲ್ಲುವುದು ಐಪಿಎಲ್ ಗೆಲ್ಲುವುದಕ್ಕಿಂತ ದೊಡ್ಡ ಸಾಧನೆ. ಐಪಿಎಲ್ ಪ್ರತಿ ವರ್ಷ ಬರುತ್ತದೆ ಮತ್ತು ನಮಗೆ ಪ್ರತಿ ವರ್ಷ ಅವಕಾಶ ಸಿಗುತ್ತದೆ. ಆದರೆ ಟೆಸ್ಟ್ ಸರಣಿ ಗೆಲ್ಲುವುದು ಅದಕ್ಕಿಂತ ದೊಡ್ಡದು ಎಂದು ಗಿಲ್ ಹೇಳಿದರು.
ಇನ್ನು 3 ನೇ ಕ್ರಮಾಂಕದ ಬ್ಯಾಟಿಂಗ್ ಬಗ್ಗೆ ಮಾತನಾಡಿದ ಗಿಲ್, ‘ನಾವು ಮತ್ತೊಮ್ಮೆ ಪಿಚ್ ನೋಡಿ ಆ ನಂತರ 3 ನೇ ಕ್ರಮಾಂಕವನ್ನು ನಿರ್ಧರಿಸುತ್ತೇವೆ. ವಿರಾಟ್ ಭಾಯ್ ನಿವೃತ್ತಿಯ ನಂತರ, ಗೌತಮ್ ಗಂಭೀರ್ ಮತ್ತು ನಾನು ಮಾತನಾಡಿ 4 ನೇ ನಂಬರ್ನಲ್ಲಿ ಆಡಲು ನಿರ್ಧರಿಸಿದೆವು’ ಎಂದು ಹೇಳಿದರು.
ನಾನು ಬ್ಯಾಟಿಂಗ್ ಮಾಡಲು ಹೋದಾಗ, ನಾನು ಬ್ಯಾಟ್ಸ್ಮನ್ ಆಗಿ ಮಾತ್ರ ಆಡಲು ಬಯಸುತ್ತೇನೆ, ನಾಯಕತ್ವದ ಬಗ್ಗೆ ಯೋಚಿಸುವುದಿಲ್ಲ. ಏಕೆಂದರೆ ಅದು ಒತ್ತಡವನ್ನು ಉಂಟುಮಾಡುತ್ತದೆ. ನಾನು ಈ ಸರಣಿಯ ಅತ್ಯುತ್ತಮ ಬ್ಯಾಟ್ಸ್ಮನ್ ಆಗಲು ಬಯಸುತ್ತೇನೆ ಎಂದರು.