ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಮನೆಗಳ ಹಂಚಿಕೆಗೆ ಲಂಚ ಪಡೆಯಲಾಗುತ್ತಿದೆ ಎಂದು ಆಳಂದ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಮಾತನಾಡಿದ್ದಾರೆ ಎನ್ನಲಾದ ವೈರಲ್ ಆಡಿಯೋ ಸದ್ಯ ರಾಜ್ಯ ರಾಜಕೀಯದಲ್ಲಿ ಗದ್ದಲ ಸೃಷ್ಟಿಸಿದೆ. ಇನ್ನೂ ಈ ವಿಚಾರವಾಗಿ ಕರ್ನಾಟಕ ವಿಧಾನ ಪರಿಷತ್ ಶಾಸಕ ಹಾಗು ಜೆ.ಡಿ.ಎಸ್ ನಾಯಕರಾದ ಟಿ. ಎ.ಶರವಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,
ರಾಜ್ಯದ ಕಾಂಗ್ರೆಸ್ ಸರಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವ ನೃತ್ಯ ಆಡುತ್ತಿದೆ ಎನ್ನುವುದಕ್ಕೆ ಹಿರಿಯ ಶಾಸಕ ಬಿಆರ್ ಪಾಟೀಲ್ ತಮ್ಮದೇ ಸರಕಾರದ ವಿರುದ್ಧ ಮಾಡಿರುವ ಸ್ಫೋಟಕ ಆರೋಪವೇ ಸಾಕ್ಷಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣ್ಣ ಬಯಲಾಗಿದೆ ಎಂದು ಕಿಡಿಕಾರಿದ್ದಾರೆ.
ನಿಮಗೂ ಗ್ಯಾಸ್ಟ್ರಿಕ್ ಸಮಸ್ಯೆ ಇದ್ಯಾ!? ಹಾಗಿದ್ರೆ ಈ ಆಹಾರಗಳನ್ನು ತಪ್ಪದೇ ಸೇವಿಸಿ!
ಅದರಲ್ಲೂ ವಸತಿ ಇಲಾಖೆಯಲ್ಲಿ ಹೆಜ್ಜೆ ಹೆಜ್ಜೆಗೂ ಕಾಂಚಾಣ ವೇ ಮಾತಾಡಬೇಕು. ಹಣ ಇಲ್ಲದಿದ್ದರೆ ಅಲ್ಲಿ ಏನೇನೂ ಆಗುವುದಿಲ್ಲ ಎಂದು ಆಡಳಿತ ಪಕ್ಷದ ಶಾಸಕರೇ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಮಂತ್ರಿ ಜಮೀರ್ ಅಹ್ಮದ್ ರಾಜೀನಾಮೆ ಕೊಟ್ಟು ತೊಲಗಬೇಕು.. ಇಲ್ಲದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಶರವಣ ಒತ್ತಾಯಿಸಿದ್ದಾರೆ.
ಇನ್ನೂ ಸಚಿವ ಜಮೀರ್ ಅಹ್ಮದ್ ಅವರ ಆಪ್ತ ಕಾರ್ಯದರ್ಶಿ ಸರ್ಫರೋಜ್ ಖಾನ್ ಅವರೇ ಇಲಾಖೆಯಲ್ಲಿನ ಮನೆ ಹಂಚಿಕೆಗೆ ಲಂಚ ಕೊಡುವ ಪರಿಸ್ಥಿತಿ ಇದೆ ಎಂದು ಆಡಳಿತ ಪಕ್ಷದ ಶಾಸಕರಿಗೇ ಹೇಳಿರುವುದು ನೋಡಿದರೆ ಆಡಳಿತ ವ್ಯವಸ್ಥೆ ಕುಲಗೆಟ್ಟು ಹೋಗಿರುವುದು ಅರ್ಥವಾಗುತ್ತದೆ. ಈ ಸರಕಾರ ಅಧಿಕಾರದಲ್ಲಿ ಉಳಿಯುವ ನೈತಿಕತೆಯನ್ನು ಕಳೆದುಕೊಂಡಿದೆ ಎಂದು ಶರವಣ ಕಿಡಿ ಕಾರಿದ್ದಾರೆ.ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತನಿಖೆಗೆ ಆದೇಶಿಸಬೇಕು. ತನಿಖೆಯ ಮೇಲೆ ಒತ್ತಡ ಹೇರಬಾರದು ಎನ್ನುವ ಕಾರಣಕ್ಕೆ ವಸತಿ ಮಂತ್ರಿ ಅಧಿಕಾರದಿಂದ ಕೆಳಗೆ ಇಳಿಯಬೇಕು ಎಂದು ಆಗ್ರಹಿಸಿದ್ದಾರೆ.