ನಟಿ ರಚಿತಾ ರಾಮ್ ಅವರಿಂದ ತುಂಬಾ ಲಾಸ್ ಆಗಿದೆ. ಅವರು ಸಿನಿಮಾ ಪ್ರಚಾರಕ್ಕೆ ಬಂದಿಲ್ಲ ಎಂಬ ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ತಂಡದವರ ಆರೋಪಕ್ಕೆ ರಚಿತಾ ತಿರುಗೇಟು ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ಅವರು ಅನೇಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
ಸಂಜು ವೆಡ್ಸ್ ಗೀತಾ 2 ಸಿನಿಮಾದ ನಿರ್ದೇಶಕರು, ನಿರ್ಮಾಪಕರು ಹಾಗೂ ಹೀರೋ ಇತ್ತೀಚೆಗೆ ಕೆಲವು ಸುದ್ದಿಗೋಷ್ಠಿಯಲ್ಲಿ, ಮಾಧ್ಯಮಗಳ ಸಂದರ್ಶನದಲ್ಲಿ ಒಂದಷ್ಟು ವಿಷಯಗಳನ್ನು ನನ್ನ ಬಗ್ಗೆ ಮಾತನಾಡಿದ್ದಾರೆ. ಅವರು ಬಳಸಿದ ಪದಗಳಿಂದ, ಅವರು ನೀಡಿದ ಹೇಳಿಕೆಗಳಿಂದ ನನಗೆ ತುಂಬ ನೋವಾಗಿದೆ. ನನ್ನ ಮೇಲಿನ ಎಲ್ಲಾ ಆರೋಪ ಸುಳ್ಳು. ನಾನು ಸಂಜು ವೆಡ್ಸ್ ಗೀತಾ೨ ಗೆ ಎಲ್ಲಾ ರೀತಿಯ ಸಪೋರ್ಟ್ ಮಾಡಿದ್ದೇನೆ. ಮೊದಲ ಬಾರಿ ರಿಲೀಸ್ ಆದಾಗ ಎಲ್ಲಾ ಕಾರ್ಯಕ್ರಮಗಳಿಗೂ ಅಟೆಂಡ್ ಮಾಡಿದ್ದೇನೆ. ಎಲ್ಲಾ ಮಾಧ್ಯಮಗಳ ಎದುರು ಆಗೆಲ್ಲಾ ನನ್ನ ಹೊಗಳಿದ್ದಾರೆ. ರಚಿತಾ ರಾಮ್ ಅಂದ್ರೆ ಸಪೋರ್ಟಿವ್ ಅಂತೆಲ್ಲಾ ಮಾತಾಡಿದ್ದಾರೆ. ಈಗ ಯಾಕೆ ನನ್ನ ಅನುಪಸ್ಥಿತಿಯಲ್ಲಿ ಆ ರೀತಿ ಮಾತಾಡ್ತಿದ್ದಾರೋ ಗೊತ್ತಿಲ್ಲ. ಇದೇ ಸಂಜು ವೆಡ್ಸ್ ಗೀತಾ ಟೀಮ್ ಅವರು ಶೂಟಿಂಗ್ ಕಾರಣವೊಡ್ಡಿ, ಬೇರೊಂದು ಸಿನಿಮಾ ಪ್ರಮೋಷನ್ ಗೆ ಅವಕಾಶ ಮಾಡಿಕೊಡಲಿಲ್ಲ.
ಅವರು ದುಡ್ಡು ಹಾಕಿರ್ಲಿಲ್ವಾ? ಅವಾಗ ಇನ್ನೊಬ್ಬರು ನಿರ್ಮಾಪಕರಿಗೆ ಕಷ್ಟ ಆಗ್ಲಿಲ್ವಾ ಸರಿಯಾದ ಪ್ಲ್ಯಾನಿಂಗ್ ಇರಲಿಲ್ಲ.. ಒಂದೊಂದು ದಿನ ಒಂದೊಂದು ಶೆಡ್ಯೂಲ್ ಹೇಳ್ತಾ ಇದ್ರು. ಇವತ್ತು ಕಾರ್ಯಕ್ರಮ ಅಂತೇಳಿ ಕೊನೆ ಕ್ಷಣದಲ್ಲಿ ಮುಂದೂಡ್ತಾ ಇದ್ರು. ಹೀಗಾಗಿ ನಾನು ಎರಡನೇ ಬಾರಿ ರಿಲೀಸ್ ಪ್ರಚಾರದಲ್ಲಿ ಪಾಲ್ಗೊಳ್ಳಲಾಗಲಿಲ್ಲ. ಇದೆಲ್ಲಾ ನನ್ನ ಮೇಲೆ ಬೇಕಂತಲೇ ಮಾಡಿರೋ ಆರೋಪ. ಹಾಗೆ ಇನ್ನೊಂದು ಸಿನಿಮಾದ ಅಡ್ವಾನ್ಸ್ ಪಡೆದು ವಾಪಸ್ ಮಾಡಿಲ್ಲ ಅನ್ನೋ ವಿಚಾರ ಸಾರಾ ಗೋವಿಂದು ನೇತೃತ್ವದಲ್ಲಿ ಮಾತುಕತೆಯಲ್ಲಿದೆ.. ನಾನು ಆ ಬಗ್ಗೆ ಏನನ್ನು ಮಾತನಾಡುವಂತಿಲ್ಲ ಎಂದು ಎಲ್ಲಾ ಆರೋಪಗಳಿಗೂ ರಚಿತಾ ರಾಮ್ ಸ್ಪಷ್ಟನೆ ಕೊಟ್ಟಿದ್ದಾರೆ.