ನವದೆಹಲಿ:- ದೇಶ ಮೊದಲು, ಪಕ್ಷ ನಂತರ ಎಂದು ನಾವು ಹೇಳಿದ್ದೇವೆ. ಕೆಲವು ಜನರು ‘ಮೋದಿ ಮೊದಲು, ದೇಶ ನಂತರ’ ಎಂದು ಭಾವಿಸುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಸಂಸದ ಶಶಿ ತರೂರ್ಗೆ ಟಾಂಗ್ ಕೊಟ್ಟ ಬೆನ್ನಲ್ಲೇ ಶಶಿ ತರೂರ್ ಮಾರ್ಮಿಕವಾಗಿ ಪೋಸ್ಟ್ ಮಾಡಿದ್ದಾರೆ.
ಮೊಬೈಲ್ ಬ್ಯಾಟರಿ ಬೇಗ ಖಾಲಿಯಾಗುತ್ತದೆಯೇ?: ಹಾಗಿದ್ರೆ ಈ ಸಲಹೆ ಅನುಸರಿಸಿ!
ಪ್ರಧಾನಿ ಮೋದಿಯನ್ನು ಹೊಗಳಿದ್ದಕ್ಕೆ ಕಾಂಗ್ರೆಸ್ ನಾಯಕರು ಶಶಿ ತರೂರ್ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇಂದು ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಶಶಿ ತರೂರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದರು. ಅದರ ಬೆನ್ನಲ್ಲೇ ಶಶಿ ತರೂರ್ ಕೂಡ ಸಾಮಾಜಿಕ ಜಾಲತಾಣದಲ್ಲಿ “ಹಾರಾಡಲು ಯಾರ ಅನುಮತಿಯನ್ನೂ ಕೇಳಬೇಡಿ, ರೆಕ್ಕೆಗಳು ನಿಮ್ಮವು, ಆಕಾಶ ಯಾರಿಗೂ ಸೇರಿದ್ದಲ್ಲ” ಎಂದು ನಿಗೂಢ ಅರ್ಥದ ಪೋಸ್ಟ್ ಒಂದನ್ನು ಹಾಕಿದ್ದಾರೆ.
ಇನ್ನೂ ಕಾಂಗ್ರೆಸ್ ಹೈಕಮಾಂಡ್ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದನ್ನು ಅವರೇ 2-3 ದಿನಗಳ ಹಿಂದೆ ಬಹಿರಂಗವಾಗಿ ಒಪ್ಪಿಕೊಂಡಿದ್ದರು. ಆದರೆ, ಕಾಂಗ್ರೆಸ್ ಪಾಲಿಗೆ ಬಿಸಿ ತುಪ್ಪವಾಗಿರುವ ಶಶಿ ತರೂರ್ ಪ್ರಧಾನಿ ಮೋದಿಯವರನ್ನು ಪದೇಪದೆ ಹೊಗಳುತ್ತಿರುವುದನ್ನು ಕಾಂಗ್ರೆಸ್ ನಾಯಕರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಪತ್ರಿಕೆಯೊಂದಕ್ಕೆ ಬರೆದ ಅಂಕಣದಲ್ಲಿ ಶಶಿ ತರೂರ್ “ಪ್ರಧಾನಿ ಮೋದಿ ಭಾರತದ ದೊಡ್ಡ ಆಸ್ತಿ. ಮೋದಿಯವರ ಶಕ್ತಿ, ಚೈತನ್ಯ ಮತ್ತು ತೊಡಗಿಸಿಕೊಳ್ಳುವ ಇಚ್ಛೆ ವಿಶೇಷವಾದುದು. ಅವರಿಗೆ ಹೆಚ್ಚಿನ ಬೆಂಬಲದ ಅಗತ್ಯವಿದೆ” ಎಂದು ಬರೆದಿದ್ದರು. ಇದು ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು.