ವಿಜಯಪುರ: ಬೀದರ್, ಮಂಗಳೂರಿನಲ್ಲಿ ನಡೆದ ಬ್ಯಾಂಕ್ ಕಳ್ಳತನ ಪ್ರಕರಣಗಳು ಇಡೀ ರಾಜ್ಯವನ್ನೇ ಬೆಚ್ಚಿ ಬೀಳೀಸಿದ್ದವು. ಈ ಪ್ರಕರಣ ಬೆನ್ನಲ್ಲೇ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಕೆನರಾ ಬ್ಯಾಂಕ್ನಲ್ಲಿ ಕಳ್ಳತನವಾಗಿತ್ತು. ಬ್ಯಾಂಕ್ನಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿತ್ತು. ಇದೀಗ ಈ ಪ್ರಕರಣದಲ್ಲಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿದ್ದ ಬ್ಯಾಂಕ್ ಮ್ಯಾನೇಜರ್ ಕೈವಾಡವಿರುವುದು ಬೆಳಕಿಗೆ ಬಂದಿದೆ.
ವರ್ಗಾವಣೆ ವೇಳೆ ಅಸಲಿ ಕೀ ನಕಲಿ ಕೀ ಮಾಡಿಸಿಕೊಂಡಿದ್ದ ಎಂದು ತಿಳಿದು ಬಂದಿದ್ದು, ಮ್ಯಾನೇಜರ್ ಸೇರಿ ಮೂವರನ್ನು ಬಂಧಿಸಲಾಗಿದೆ. ಸದ್ಯ ಗದಗನಲ್ಲಿ ಕೆನರಾ ಬ್ಯಾಂಕ್ ನ ಸಿನಿಯರ್ ಮ್ಯಾನೇಜರ್ ಆಗಿರೋ ವಿಜಯಕುಮಾರ್ ಮಿರಿಯಾಲ, ಹುಬ್ಬಳ್ಳಿಯ ಖಾಸಗಿ ಉದ್ಯೋಗಿ ಚಂದ್ರಶೇಖರ ನೆರೆಲ್ಲಾ , ಸುನೀಲ್ ಮೋಕಾ ಬಂಧಿತ ಆರೋಪಿಗಳಾಗಿದ್ದು, ಬ್ಯಾಂಕ್ ಲಾಕರ್ನಲ್ಲಿದ್ದ ಅಂದಾಜು 53.26 ಕೋಟಿ ರೂ. ಮೌಲ್ಯದ 58.97 ಕೆ.ಜಿ (58,976.94 ಗ್ರಾಂ.) ಬಂಗಾರದ ಆಭರಣಗಳು ಹಾಗೂ 5,20,450 ರೂ. ಹಣ ಒಟ್ಟು 53,31,20,450 ಕೋಟಿ ರೂ. ಮೌಲ್ಯದ ಬಂಗಾರದ ಆಭರಣಗಳು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು.
ಒಳಸಂಚು ಮಾಡಿ ಬ್ಯಾಂಕಿನಲ್ಲಿದ್ದ ಬೃಹತ್ ಮೊತ್ತದ ಬಂಗಾರದ ಆಭರಣಗಳನ್ನು ಹಾಗೂ ನಗದು ಹಣವನ್ನು ದೋಚಿಕೊಂಡು ಹೋಗಿದ್ದಲ್ಲದೇ, ಕಳ್ಳತನ ಮಾಡಿದ ಆರೋಪಿಗಳು ತನಿಖೆಯ ದಿಕ್ಕು ತಪ್ಪಿಸಲು, ಬ್ಯಾಂಕ್ ಪ್ರವೇಶ ದ್ವಾರದ ಕೀ ಮುರಿದು ಒಳಗೆ ಹೋಗಿ ಕಳ್ಳತನ ಮಾಡಿದ್ದಾರೆ. ನಂತರ ಬ್ಯಾಂಕ್ ಕಿಟಕಿಯ ಸರಳುಗಳನ್ನು ಒಳಗಿನಿಂದಲೇ ಕಟ್ ಮಾಡಿ ಕಿಟಕಿ ಸರಳು ಕಟ್ ಮಾಡಿ ಒಳಗೆ ನುಗ್ಗಿದ್ದಾರೆ ಎಂಬಂತೆ ಬಿಂಬಿಸಿದ್ದಾರೆ.
ಅಲ್ಲದೆ, ಬ್ಯಾಂಕ್ ಒಳಗೆ ವಾಮಾಚಾರವಾಗಿದೆ ಎಂದು ಬಿಂಬಿಸಲು ಕಪ್ಪು ಬಟ್ಟೆಯ ಬೊಂಬೆ ಇಟ್ಟು ಪೂಜೆ ಮಾಡಿದ್ದಾರೆ ಎಂಬುವುದು ಕೂಡ ತನಿಖೆಯಲ್ಲಿ ತಿಳಿದು ಬಂದಿತ್ತು. ಸದ್ಯ ಪ್ರಕರಣ ಬೇಧಿಸಲು 8 ತಂಡ ರಚಿಸಿದ್ದ ಎಸ್ ಪಿ ಲಕ್ಷ್ಮಣ್ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬಂಧಿತರಿಂದ 2 ಕಾರು ,10ಕೋಟಿ 75ಲಕ್ಷ ಮೌಲ್ಯದ 10.5 ಕೆಜಿ ಬಂಗಾರ ವಶಕ್ಕೆ ಪಡೆದಿದ್ದಾರೆ. ಇನ್ನುಳಿದ ಬಂಗಾರ ಪತ್ತೆಗೆ ತನಿಖೆ ಮುಂದುವರೆದಿದೆ.