ಬೆಂಗಳೂರು: ರಾಷ್ಟ್ರೀಯ ವೈದ್ಯರ ದಿನವನ್ನು ಭಾರತದಲ್ಲಿ ಪ್ರತಿ ವರ್ಷ ಜುಲೈ 1 ರಂದು ಆಚರಿಸಲಾಗುತ್ತದೆ. ವೈದ್ಯರನ್ನು ಗೌರವಿಸಲು ಮತ್ತು ದಿನದ 24 ಗಂಟೆಯೂ ನಿಸ್ವಾರ್ಥವಾಗಿ ಜನರಿಗೆ ಸೇವೆ ಸಲ್ಲಿಸುವ ವೈದ್ಯಕೀಯ ವೃತ್ತಿಪರರಿಗೆ ಕೃತಜ್ಞತೆ ತೋರ್ಪಡಿಸಲು ಈ ದಿನ ಆಚರಣೆ ಮಾಡಲಾಗುತ್ತದೆ.
ಗ್ರಾಹಕರಿಗೆ ಎಚ್ಚರಿಕೆ.. ನೀವು ಈ ವಿಷಯಗಳನ್ನು ತಿಳಿದುಕೊಳ್ಳಲೇಬೇಕು..! ಇಂದಿನಿಂದ ಹೊಸ ನಿಯಮಗಳು ಜಾರಿಗೆ!
ಭಾರತೀಯ ವೈದ್ಯಕೀಯ ಸಂಸ್ಥೆ 1991 ಜುಲೈ 1 ರಂದು ಮೊದಲ ಬಾರಿಗೆ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಿತು. ಅದಕ್ಕೆ ಒಂದು ಕಾರಣವೂ ಇದೆ. ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದ ಡಾ ಬಿಧನ್ ಚಂದ್ರ ರಾಯ್ ಅವರ ನೆನಪಿನಲ್ಲಿ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ. ವೈದ್ಯರಾಗಿದ್ದ ರಾಯ್, ಸುಧಾರಣಾ ವಾದಿ, ಶಿಕ್ಷಣ ತಜ್ಞರು, ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅವರ ಜನನ ಮತ್ತು ಮರಣ ದಿನ ಒಂದೇ ದಿನ ಬರುವುದು ಮತ್ತೊಂದು ವಿಶೇಷ.
ಅಸಾಧಾರಣ ವೈದ್ಯರಾಗಿದ್ದ ರಾಯ್ ಅವರ ಸೇವೆಯನ್ನು ಪರಿಗಣಿಸಿ 1961 ರ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು. ಎಲ್ಲರಿಗೂ ಮಾದರಿ ವೈದ್ಯರಾಗಿ ತಮ್ಮ ಬದುಕನ್ನು ಸವೆಸಿದ ಬಿಧನ್ ಚಂದ್ರ ರಾಯ್ ಅವರ ನೆನಪಿನಲ್ಲೇ ರಾಷ್ಟ್ರೀಯ ವೈದ್ಯರ ದಿನ ಆಚರಿಸಬೇಕೆಂದು ನಿರ್ಧರಿಸಿ ಕೇಂದ್ರ ಸರ್ಕಾರ 1991 ರ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲು ಅನುಮೋದಿಸಿತು.
ರಾಷ್ಟ್ರೀಯ ವೈದ್ಯರ ದಿನದ ಮಹತ್ವ:
ರಾಷ್ಟ್ರೀಯ ವೈದ್ಯರ ದಿನದಂದು, ವೈದ್ಯರ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಅಲ್ಲದೇ ನಮ್ಮ ಜೀವನಕ್ಕೆ ವೈದ್ಯರು ನೀಡಿದ ಕೊಡುಗೆಯನ್ನು ಸ್ಮರಿಸಿ ಪ್ರಶಂಸಿಸಲಾಗುತ್ತದೆ. ಹಾಗಾಗಿ ಈ ದಿನ ಅನೇಕ ಕಡೆಗಳಲ್ಲಿ ವೈದ್ಯರನ್ನು ಗೌರವಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಜೊತೆಗೆ ಈ ವಿಶೇಷ ದಿನವನ್ನು ಜನರ ಸೇವೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟಿರುವ ಆರೋಗ್ಯ ಕಾರ್ಯಕರ್ತರಿಗೆ ಗೌರವ ಸಲ್ಲಿಸಲಾಗುತ್ತದೆ. ನೀವು ಕೂಡ ನಿಮ್ಮ ಬದುಕಿಗೆ ಮತ್ತೆ ಜೀವ ತುಂಬಿದ ವೈದ್ಯರಿಗೆ ಈ ದಿನ ಧನ್ಯವಾದ ಹೇಳಿ.