ಹಾಸನ : ಹಾಸನದ ಪಾಲಿಗೆ ನಿಜಕ್ಕೂ ಈ ಹೃದಯಾಘಾತವೆಂಬ ಮಹಾಮಾರಿ ಭಾರೀ ಅಘಾತವನ್ನೇ ನೀಡುತ್ತಿದೆ. ದಿನದಿನಕ್ಕೂ ಈ ಹಾಸನ ಹಾರ್ಟ್ ಅಟ್ಯಾಕ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬರೀ ಹಾಸನದ ಜನತೆಯನ್ನೇ ಮಾತ್ರವಲ್ಲ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುತ್ತಿದೆ.
ಹಾಸನದಲ್ಲಿ ಮತ್ತೋರ್ವ ಯುವಕ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದು, ಈ ಮೂಲಕ ಹಾಸನದಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಹೃದಯಾಘಾತದಿಂದಾಗಿ ಮೃತಪಟ್ಟವರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. 27 ವರ್ಷದ ಸಂಜಯ್ ಮೃತನಾಗಿದ್ದು, ಸ್ನೇಹಿತರ ಜೊತೆ ಪಾರ್ಟಿಗೆ ಹೋಗಿದ್ದ ವೇಳೆ ಬಿಪಿ ಹೆಚ್ಚಾಗಿ ಹೃದಯಾಘಾತವಾಗಿದೆ.
ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, ನಿನ್ನೆ ಸಂಜೆ ಎದೆನೋವು ಎಂದು ಸೋಮನಹಳ್ಳಿ ಪ್ರಾಥಮಿಕ ಆಸ್ಪತ್ರೆಗೆ ಹೋಗಿದ್ದು, ಕೂಡಲೇ ಬಿಪಿ ಪರೀಕ್ಷೆ ಮಾಡಿಸಲಾಗಿತ್ತು. ಈ ಸಂಬಂಧ 220ಕ್ಕೂ ಅಧಿಕ ಪ್ರಮಾಣದಲ್ಲಿ ಬಿಪಿ ಇದ್ದು, ಹೆಚ್ಚಿನ ಚಿಕಿತ್ಸೆ ಗಾಗಿ ಬೇರೊಂದು ಆಸ್ಪತ್ರೆಗೆ ರೆಫರ್ ಮಾಡೋ ವೇಳೆಯೇ ಯುವಕ ಹಠಾತ್ ಸಾವನ್ನಪ್ಪಿದ್ದಾನೆ. ಇನ್ನೂ ಸಂಜಯ್ ಎರಡೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಇದೀಗ ಸಂಜಯ್ ಸಾವಿನ ಬಗ್ಗೆ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದು, ಹಳ್ಳಿಮೈಸೂರು ಠಾಣೆಯಲ್ಲಿ ಅನುಮಾನಾಸ್ಪದ ಸಾವು ಕೇಸ್ ದಾಖಲಿಸಿದ್ದಾರೆ.
ಸೋಮವಾರ ಒಂದೇ ದಿನ ಹಾಸನ ಜಿಲ್ಲೆಯಲ್ಲಿ ಆರು ಹೃದಯಾಘಾತ ಪ್ರಕರಣ ವರದಿಯಾಗಿದ್ದು, ಜೂನ್ 27 ರಂದು ಈಶ್ಚರಪ್ಪ ಹಾಗು ಜೂನ್ 30 ರಂದು ಕುಮಾರ್(53) ಲೇಪಾಕ್ಷಿ(51), ಮುತ್ತಯ್ಯ(58) ಸತ್ಯನಾರಾಯಣ ರಾವ್(63) ಹಾಗು ಸಂಜಯ್(27) ಮೃತಪಟ್ಟಿದ್ದಾರೆ. ಇನ್ನೂ 40 ದಿನಗಳಲ್ಲಿ 24 ಜನರಿಗೆ ಹೃದಯಾಘಾತವಾಗಿದ್ದ ಹಿನ್ನೆಲೆ ಅಸಹಜ ಸಾವು ಪ್ರಕರಣಗಳಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಸೂಚಿಸಲಾಗಿದೆ.