ಬೆಂಗಳೂರು:- ರೈಲ್ವೆ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ನೌಕರಿ ಕೊಡಿಸುವುದಾಗಿ 200 ರುಪಾಯಿ ವಂಚನೆ: 30 ವರ್ಷಗಳ ಬಳಿಕ ಖಾಕಿ ಬಲೆಗೆ ಬಿದ್ದ ಆರೋಪಿ!
ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು. ಕೇಂದ್ರ ಸರ್ಕಾರದ ಬೆಲೆಯೇರಿಕೆಗೆ ರಾಜ್ಯದ ಬಿಜೆಪಿ ನಾಯಕರ ಮೌನ ಖಂಡನೀಯ.
ಸಾಮಾನ್ಯ ಜನರ ಸಾರಿಗೆಯಾಗಿಯೇ ಜನಪ್ರಿಯವಾಗಿರುವ ರೈಲುಗಳ ಪ್ರಯಾಣ ದರವನ್ನು ಹೆಚ್ಚಿಸುವ ಮೂಲಕ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ದೇಶದ ಕೋಟ್ಯಂತರ ಮಧ್ಯಮ ಮತ್ತು ಬಡವರ್ಗದ ಬದುಕಿನ ಮೇಲೆ ಬರೆ ಎಳೆದಿದೆ. ಈ ಬೆಲೆ ಏರಿಕೆಯನ್ನು ತಕ್ಷಣ ಹಿಂತೆಗೆದುಕೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದರು.
ಏರುತ್ತಲೇ ಇರುವ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ದರಗಳ ಭಾರದಿಂದ ಜನರು ಈಗಾಗಲೇ ತತ್ತರಿಸಿಹೋಗಿದ್ದಾರೆ. ಹಾಲು, ಮೊಸರು, ಚಹಾ ಪುಡಿಯಿಂದ ಹಿಡಿದು ಪಾಪ್ ಕಾರ್ನ್ವರೆಗೆ ಎಲ್ಲದರ ಮೇಲೆ ಜಿಎಸ್‌ಟಿ ಹೇರಿಕೆಯಿಂದಾಗಿ ಪ್ರತಿಯೊಂದು ಕುಟುಂಬದ ಬಜೆಟ್ ಏರುಪೇರಾಗಿದೆ. ಇದೇ ವೇಳೆ ರೈಲು ಪ್ರಯಾಣದ ದರ ಹೆಚ್ಚಿಸುವ ಮೂಲಕ ನರೇಂದ್ರ ಮೋದಿ ಸರ್ಕಾರ ಜನರ ಜೇಬು ಖಾಲಿ ಮಾಡಲು ಹೊರಟಿದೆ ಎಂದು ಕಿಡಿಕಾರಿದರು.
ನಮ್ಮ ಸರ್ಕಾರ ರೈತರಿಗೆ ನೆರವಾಗುವ ಉದ್ದೇಶದಿಂದ ಹಾಲಿನ ದರ ಏರಿಕೆ ಮಾಡಿದಾಗ ಜನವಿರೋಧಿ ಎಂದು ಬೊಬ್ಬಿಟ್ಟಿದ್ದ ಬಿಜೆಪಿ ನಾಯಕರು ತಮ್ಮದೇ ಸರ್ಕಾರ ರೈಲು ಪ್ರಯಾಣ ಹೆಚ್ಚಿಸಿದಾಗ ಸದ್ದಿಲ್ಲದೆ ಬಿಲ ಸೇರಿಕೊಂಡಿದ್ದಾರೆ. ಬೆಂಗಳೂರು ಮೆಟ್ರೊ ರೈಲಿನ ಪ್ರಯಾಣ ದರ ಏರಿಕೆಯಾದಾಗ ಬೀದಿಗಿಳಿದಿದ್ದ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಪ್ರತಿನಿಧಿಗಳನ್ನು ಹೊಂದಿರುವ ದರ ನಿರ್ಣಯ ಸಮಿತಿಯೇ ಆ ಏರಿಕೆಯ ನಿರ್ಧಾರ ಕೈಗೊಂಡಿರುವುದನ್ನು ಬಚ್ಚಿಟ್ಟು ನಮ್ಮ ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟುವ ವಿಫಲ ಪ್ರಯತ್ನ ನಡೆಸಿದ್ದರು ಎಂದು ಹರಿಹಾಯ್ದರು