ಗೋಲ್ಡನ್ ಸ್ಟಾರ್ ಗಣೇಶ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮಳೆ ಹುಡ್ಗನ ಬರ್ತಡೇ ಪ್ರಯುಕ್ತ ಹೊಸ ಸಿನಿಮಾ ಘೋಷಣೆಯಾಗಿದೆ. ಬಹಳ ದಿನಗಳಿಂದ ಸುದ್ದಿಯಲ್ಲಿದ್ದ ಭರ್ಜರಿ, ಬಹದ್ದೂರ್, ಭರಾಟೆ ಸಿನಿಮಾಗಳ ಖ್ಯಾತಿಯ ನಿರ್ದೇಶಕ ಚೇತನ್ ಕುಮಾರ್ ಗಣೇಶ್ ಅವರ ಮುಂದಿನ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಗಣೇಶ್ ಪಿನಾಕಾ, Yours Sincerely Raam ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಡೈರೆಕ್ಟರ್ ಅರಸು ಅಂತಾರೆ ನಿರ್ದೇಶನದ ಚಿತ್ರವನ್ನು ಗಣೇಶ್ ಮಾಡುತ್ತಿದ್ದಾರೆ. ಈ ಚಿತ್ರದ ಬಳಿಕ ಚೇತನ್ ಕುಮಾರ್ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟಿಸಲಿದ್ದಾರೆ.
ಕಮರ್ಷಿಯಲ್ ಸಿನಿಮಾಗಳನ್ನು ಮಾಡಿಕೊಂಡು ಬಂದವರು ಚೇತನ್. ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾಗಳ ಸರದಾರ ಗಣೇಶ್. ಹಾಗಾಗಿ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಯಾವ ರೀತಿಯ ಸಿನಿಮಾ ಬರಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಇದಕ್ಕೀಗ ಉತ್ತರ ಸಿಕ್ಕಿದೆ. ಗಣೇಶ್ ಅವರ ಮ್ಯಾನರಿಸಂಗೆ ತಕ್ಕಂತೆ ಚೇತನ್ ಸಿನಿಮಾ ಮಾಡಲು ಹೊರಟ್ಟಿದ್ದಾರೆ. ರೋಮ್ಯಾಂಟಿಕ್ ಎಲಿಮೆಂಟ್ಸ್ ಇರಲಿದ್ದು, ಆದರೆ ಚೇತನ್ ಅವರ ಮೇಕಿಂಗ್ ಸ್ಟೈಲ್ ಅಲ್ಲಿಯೇ ಚಿತ್ರದಲ್ಲಿ ಇರಲಿದೆ ಅನ್ನೋದೇ ಸ್ಪೆಷಲ್.
ಭುವನಂ ಗಗನಂ, ಅಯೋಗ್ಯ 2 ಸಿನಿಮಾ ನಿರ್ಮಿಸಿರುವ ಮುನೇಗೌಡ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಶಿವು ಗೌಡ ಕೂಡ ನಿರ್ಮಾಣದಲ್ಲಿ ಸಾಥ್ ಕೊಡುತ್ತಿದ್ದಾರೆ. ಎಸ್ ವಿಜಿ ಫಿಲ್ಮಂ ಬ್ಯಾನರ್ ನಡಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಸದ್ಯ ಪ್ರೊಡಕ್ಷನ್ 3 ಎಂಬ ತಾತ್ಕಾಲಿಕ ಶೀರ್ಷಿಕೆ ಇಡಲಾಗಿದೆ. ಇನ್ನು ಮುನೇಗೌಡ ಅವರೇ ಈ ಚಿತ್ರವನ್ನು ಪ್ರೆಸೆಂಟ್ ಮಾಡಲಿದ್ದಾರೆ. ಶೀಘ್ರದಲ್ಲೇ ಉಳಿದ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ.