ಮಂಡ್ಯ : ಮಿಮ್ಸ್ ಆಸ್ಪತ್ರೆಯಲ್ಲಿ ಕಾರ್ಡಿಯಾಕ್ ಸ್ಪೆಷಲಿಸ್ಟ್ ಇಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಇಂದು ಮಂಡ್ಯದಲ್ಲಿ ಮಾತನಾಡಿದ ಅವರು, ಹಾಸನಲ್ಲಿ 32ಕ್ಕೂ ಅಧಿಕ ಸಾವು ಆಗಿವೆ. ಇದನ್ನು ತಡೆಗಟ್ಟಲು ಮುಂಜಾಗ್ರತ ಕ್ರಮ ತೆಗೆದುಕೊಳ್ಳಬೇಕಾಗಿದೆ. ಹಾಸನ ಮಾತ್ರ ಅಲ್ಲ ರಾಜ್ಯಾದ್ಯಂತ ಹೃದಯಾಘಾತ ಹೆಚ್ಚಾಗುತ್ತಿವೆ. ಪ್ರತಿ ತಾಲೂಕಿನಲ್ಲಿ ಜೆಡಿಎಸ್ನಿಂದ ಹೃದಯ ತಪಾಸಣೆ ಮಾಡಲು ಚರ್ಚೆ ಮಾಡುತ್ತಿದ್ದೇವೆ ಎಂದರು.
ಮಿಮ್ಸ್ನಲ್ಲಿ ಹೃದಯ ವಿಭಾಗ ಇಲ್ಲ. ಹೊಸದಾಗಿ ಹೃದಯ ವಿಭಾಗ ಮಾಡಬೇಕು. ಇದನ್ನು ರಾಜ್ಯ ಸರ್ಕಾರ ತೀರ್ಮಾನ ಮಾಡಬೇಕು. ಸಚಿವರು ಇದರ ಬಗ್ಗೆ ಗಮನಹರಿಸಬೇಕು ಎಂದರು.
ಇನ್ನೂ ಇಂದು ಕೇಂದ್ರ ಸಚಿವ ಕುಮಾರಸ್ವಾಮಿ ನೇತೃತ್ವದಲ್ಲಿ ದಿಶಾ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಹೃದಯಾಘಾತ ಸಾವು ವಿಚಾರ ಚರ್ಚೆಗೆ ಬಂದಿದೆ. ಈ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳ ಬಳಿ ಮಾಹಿತಿ ಕೇಳಿದ್ದು, ಮಂಡ್ಯದಲ್ಲಿ ಹೃದಯಾಘಾತದ ವಿಚಾರದ ಯಾವುದೇ ಸಮಸ್ಯೆಗಳು ಕಾಣಿಸಿಕೊಂಡಿಲ್ಲ. ಯುವಕರಿಗೆ ಹೃದಯಾಘಾತವಾಗಿರುವುದು ಬೆಳಕಿಗೆ ಬಂದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್ ಸಭೆಗೆ ಮಾಹಿತಿ ನೀಡಿದ್ದಾರೆ.
ಮಿಮ್ಸ್ ಆಸ್ಪತ್ರೆಯಲ್ಲಿ ಹೃದಯ ಚಿಕಿತ್ಸೆ ವಿಭಾಗ ಇಲ್ಲ ಎಂಬ ವಿಚಾರವಾಗಿ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಮನವಿ ಮಾಡಲಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾದರೆ ಚಿಕಿತ್ಸೆ ಕೊಡಲಾಗುತ್ತೆ. ಸದ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಒಬ್ಬರು ವೈದ್ಯರು ಇದ್ದರು. ಕೇವಲ ಪರೀಕ್ಷೆ ಮಾಡಿ ಹೆಚ್ಚಿನ ಚಿಕಿತ್ಸೆ ಅಥವಾ ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇದ್ದರೆ ಬೇರೆ ಆಸ್ಪತ್ರೆಗೆ ರೆಫರ್ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.