ಕೊಡವ ಸಮುದಾಯದಿಂದ ಸಿನಿಮಾಗೆ ಬಂದವರಲ್ಲಿ ನಾನೇ ಮೊದಲು ಎಂದು ಹೇಳುವ ಮೂಲಕ ನಟಿ ರಶ್ಮಿಕಾ ಮಂದಣ್ಣ ಮತ್ತೊಂದು ವಿವಾದ ಮೇಲೆ ಎಳೆದುಕೊಂಡಿದ್ದಾರೆ. ಮಂಕು ಬುದ್ದಿ ಮಂದಣ್ಣ ವಿಡಿಯೋ ನೋಡಿ ಸಿನಿರಸಿಕರು, ನಟಿ ಪ್ರೇಮಾ, ನಿಧಿ ಸುಬ್ಬಯ್ಯ, ಹರ್ಷಿಕಾ ಪೂಣಚ್ಚ, ಶುಭ್ರ ಅಯ್ಯಪ್ಪ ಯಾವ ಸಮುದಾಯದವರು ಅಂತಾ ಪ್ರಶ್ನೆ ಮಾಡ್ತಿದ್ದಾರೆ. ಈ ನಡುವೆ ಕಿರಿಕ್ ಹುಡ್ಗಿ ಪರ ಕೊಡವತಿ ಹರ್ಷಿಕಾ ಬ್ಯಾಟ್ ಬೀಸಿದ್ದಾರೆ.
ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ನಟಿ ಹರ್ಷಿಕಾ ಪೂಣಚ್ಚ, ಇದನ್ನೂ ವಿವಾದ ಅಂತ ಹೇಳೋದಿಲ್ಲ. ಯಾವುದೋ ಸಂದರ್ಶನವೊಂದರಲ್ಲಿ ಗೊತ್ತಿಲ್ಲದೇ ಮಾತಾಡಿದ್ದಾರೆ ಅನ್ಸುತ್ತೆ. ತೆಲುಗು ಹಾಗೂ ಹಿಂದಿ ಇಂಡಸ್ಟ್ರಿಯಲ್ಲಿ ನಾನು ಹೆಸರು ಮಾಡಿದ್ದೇನೆ ಅನ್ನೋ ಅರ್ಥದಲ್ಲಿ ಹೀಗೆ ಹೇಳಿರಬಹುದು. ಅದೇ ವೇಳೆ ನಾನೇ ಫಸ್ಟ್ ಅನ್ನೋದು ಬಂದಿದೆ. ಹಾಗೇ ನೋಡೋದಕ್ಕೆ ಹೋದ್ರೇ ನಾವು ಆಗ ಹುಟ್ಟೇ ಇರಲಿಲ್ಲ. ಆಗಿನ ಕಾಲದಲ್ಲೇ ಡಾ. ರಾಜ್ ಕುಮಾರ್ ಅವರ ಜೊತೆಗೆ ಕೊಡಗಿನ ಶಶಿಕಲಾ ನಟನೆ ಮಾಡಿದ್ದಾರೆ ಎಂದರು.
ಇನ್ನೂ, ಮಾತನ್ನು ಮುಂದುವರೆಸಿದ ಅವರು, ನಾವೆಲ್ಲ ನಟಿ ಪ್ರೇಮಾ ಅವರನ್ನು ನೋಡಿಕೊಂಡು ಬೆಳೆದು ಬಂದಿದ್ದೇವೆ. ಅವರು ಎಂತಹ ಅದ್ಭುತ ನಟಿ. ಸಿನಿಮಾನೇ ಅವರಿಂದ ನಡೆಯುತ್ತಾ ಇತ್ತು. ಅವರು ಸಿನಿಮಾದಲ್ಲಿ ಇದಾರೆ ಎಂದರೆ ಸಖತ್ ಬ್ಯುಸಿನೆಸ್ ಆಗೋದು. ಈಗಿನ ಕಾಲದಲ್ಲಿ ಸಾಕಷ್ಟು ನಟಿಯರು ಕೊಡಗಿನವರಾಗಿದ್ದಾರೆ. ಆದ್ರೆ ಬಾಯ್ತಪ್ಪಿ ಹಾಗೇ ಹೇಳಿದ್ದಾರೆ ಅನ್ಸುತ್ತೆ. ನನಗೆ ರಶ್ಮಿಕಾ ಮಂದಣ್ಣ ಮೇಲೆ ತುಂಬಾ ಗೌರವ ಇದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಮೂದಾಯಕ್ಕೆ ಹೆಸರನ್ನು ತಂದು ಕೊಟ್ಟಿದ್ದಾರೆ. ನಮಗೆ ರಶ್ಮಿಕಾ ಮಂದಣ್ಣ ಅವರ ಮೇಲೆ ಹೆಮ್ಮೆ ಇದೆ. ತುಂಬಾ ಹೆಸರು ಮಾಡಿದ್ದಾರೆ. ರಶ್ಮಿಕಾ ಗೊತ್ತಿಲ್ಲದೇ ತಪ್ಪು ಮಾಡಿರಬಹುದು. ಎಲ್ಲರೂ ಅವರನ್ನು ಕ್ಷಮಿಸೋಣ, ಚಿಕ್ಕ ಹುಡುಗಿ ಎಲ್ಲೋ ತಪ್ಪು ಮಾಡಿದ್ದಾರೆ.
ಏನಿದು ವಿವಾದ?
ಸಂದರ್ಶನವೊಂದಲ್ಲಿ ರಶ್ಮಿಕಾ ಮಂದಣ್ಣ, ನನ್ನ ಮೊದಲ ಚೆಕ್ ಸಿಕ್ಕಾಗ, ಮನೆಯಲ್ಲಿ ಏನೆಲ್ಲಾ ಮಾತಾಡುತ್ತಿದ್ದರು ಅಂತ ನನಗೆ ನೆನಪಿದೆ. ಅದು ಸುಲಭವೂ ಆಗಿರಲಿಲ್ಲ. ಯಾಕಂದ್ರೆ ಕೂರ್ಗ್ ಸಮುದಾಯದಲ್ಲಿ, ಯಾರೂ ಸಿನಿಮಾ ಜಗತ್ತಿಗೆ ಬಂದಿರಲಿಲ್ಲ ಅಂತ ನನಗನಿಸುತ್ತೆ, ಇಡೀ ಸಮುದಾಯದಲ್ಲಿ ನಾನೇ ಮೊದಲು ಇಂಡಸ್ಟ್ರಿಗೆ ಬಂದಿದ್ದು ಎಂದಿದ್ದಾರೆ.