ಉತ್ತರ ಪ್ರದೇಶ: ಹೆರಿಗೆ ನೋವಿನಿಂದ ತೀವ್ರವಾಗಿ ಬಳಲುತ್ತಿದ್ದ ಗರ್ಭಿಣಿ ಮಹಿಳೆಯೊಬ್ಬರ ಬದುಕಿಗೆ ಅಪಾಯ ಎದುರಾಗಿದ್ದ ಸಂದರ್ಭ, ಝಾನ್ಸಿ ರೈಲ್ವೆ ನಿಲ್ದಾಣದಲ್ಲಿ ಕೇವಲ ಕೂದಲಿನ ಕ್ಲಿಪ್ ಮತ್ತು ಪಾಕೆಟ್ ಚಾಕುವಿನಿಂದ ಹೆರಿಗೆ ಮಾಡಿಸಿ ತಾಯಿ ಹಾಗೂ ಮಗು ಇಬ್ಬರಿಗೂ ಜೀವದಾನ ನೀಡಿದ ಸೇನಾ ವೈದ್ಯರು ದೇಶಾದ್ಯಂತ ಪ್ರಶಂಸೆಗೊಳ್ಳುತ್ತಿದ್ದಾರೆ.
ಈ ಅಪರೂಪದ ಘಟನೆ ಮಧ್ಯ ರೈಲ್ವೆ ಝಾನ್ಸಿ ವಿಭಾಗದಲ್ಲಿ ನಡೆದಿದೆ. ಪನ್ವೆಲ್-ಗೋರಖ್ಪುರ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಮಹಿಳೆ ಹೆರಿಗೆ ನೋವು ಅನುಭವಿಸಿದರು. ಝಾನ್ಸಿ ನಿಲ್ದಾಣದಲ್ಲಿ ಅವರನ್ನು ತಕ್ಷಣ ಇಳಿಸಿ, ವೈದ್ಯಕೀಯ ನೆರವಿಗಾಗಿ ಪ್ರಯತ್ನ ಆರಂಭಿಸಲಾಯಿತು. ಮಹಿಳೆ ಮೇಲೆ ವೇದನೆ ತೀವ್ರವಾಗಿದರಿಂದ, ಲಿಫ್ಟ್ ಬಳಿ ಅವರು ಬಿದ್ದಿದ್ದರು.
ಈ ಸಮಯದಲ್ಲಿ, ಹೈದರಾಬಾದ್ಗೆ ಪ್ರಯಾಣಕ್ಕಾಗಿ ನಿಲ್ದಾಣದಲ್ಲಿ ಕಾಯುತ್ತಿದ್ದರು ಮೇಜರ್ ಡಾ. ರೋಹಿತ್ ಬಚ್ವಾಲಾ (ವಯಸ್ಸು 31). ಅವರು ಸನ್ನಾಹವಿಲ್ಲದ ಈ ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ಪ್ರತಿಕ್ರಿಯಿಸಿದರು. ರೈಲ್ವೆ ಸಿಬ್ಬಂದಿಯ ಸಹಾಯದಿಂದ ಪ್ಲಾಟ್ಫಾರ್ಮ್ ಮೇಲೆಯೇ ತಾತ್ಕಾಲಿಕ ಹೆರಿಗೆ ಸಿದ್ಧತೆ ನಡೆಯಿತು.
ಅಪರಿಚಿತ ಪರಿಸರ, ಯಾವುದೇ ವೈದ್ಯಕೀಯ ಉಪಕರಣಗಳಿಲ್ಲದ ತಾತ್ಕಾಲಿಕ ಪರಿಸ್ಥಿತಿಯಲ್ಲಿ ಅವರು ಹೆರಿಗೆಯನ್ನೇ ನಡೆಸಿದರು. ಅವರು ಕೇವಲ ಒಂದು ಹೇರ್ ಕ್ಲಿಪ್ ಮತ್ತು ಪಾಕೆಟ್ ಚಾಕುವಿನ ನೆರವಿನಿಂದ ಹೆರಿಗೆ ಮಾಡಿಸಿ, ತಾಯಿ ಮತ್ತು ಹೆಣ್ಣು ಮಗುವನ್ನು ಸುರಕ್ಷಿತವಾಗಿ ಜನ್ಮ ಕೊಡಿಸಿದರು. ಹೆರಿಗೆ ಬಳಿಕ ಹೊಕ್ಕುಳಬಳ್ಳಿಯನ್ನು ಹೇರ್ ಕ್ಲಿಪ್ನಿಂದ ಲಾಕ್ ಮಾಡಿ ಚಾಕುವಿನಿಂದ ಕಡಿದು ಮಹಿಳೆಯ ಜೀವ ಉಳಿಸಿದರು.
ಅನಂತರ ತಾಯಿ ಮತ್ತು ಮಗುವನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ತಮ್ಮ ಸೇವೆಯನ್ನು ಪೂರೈಸಿದ ಬಳಿಕ ತಾವು ಕಾಯುತ್ತಿದ್ದ ರೈಲಿನಲ್ಲಿ ಹೈದರಾಬಾದ್ಗೆ ತೆರಳಿದರು. ಈ ಸಾಹಸಕ್ಕೆ ರೈಲ್ವೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಸಾರ್ವಜನಿಕರು ವೈದ್ಯರ ಸಮಯಪ್ರಜ್ಞೆ ಮತ್ತು ಮಾನವೀಯತೆಯ ನಡೆಗೆ ಭಾರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.ಝಾನ್ಸಿ ರೈಲ್ವೆ ವಿಭಾಗದ ಪಿಆರ್ಒ ಮನೋ ಕುಮಾರ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದು, ಇದೊಂದು ನಿದರ್ಶನವಾಗಿದೆ ಎಂಬಂತೆ ಪ್ರತಿಕ್ರಿಯಿಸಿದ್ದಾರೆ.