ನವದೆಹಲಿ: ದ್ವಿಚಕ್ರ ವಾಹನ ಸವಾರರ ಸುರಕ್ಷತೆಯ ಬಗ್ಗೆ ಗಂಭೀರವಾಗಿ ಮುಂದಾಗಿರುವ ಕೇಂದ್ರ ಸರ್ಕಾರ, ಗುಣಮಟ್ಟವಿಲ್ಲದ ಹೆಲ್ಮೆಟ್ಗಳ ಉತ್ಪಾದನೆ ಮತ್ತು ಮಾರಾಟದ ವಿರುದ್ಧ ತೀವ್ರ ಕ್ರಮಕ್ಕೆ ಕೈಹಾಕಿದೆ. ರಸ್ತೆ ಬದಿಯಲ್ಲಿ ಧಾರಾಳವಾಗಿ ಮಾರಾಟವಾಗುತ್ತಿರುವ ಅಣಿಯ ಗುಣಮಟ್ಟದ ಹೆಲ್ಮೆಟ್ಗಳು ಅಪಾಯವನ್ನು ಹುಟ್ಟುಹಾಕುತ್ತಿದ್ದು, ಇವು ತಕ್ಷಣ ನಿಷೇಧಕ್ಕೆ ಒಳಪಡಲಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ, ಭಾರತೀಯ ಮಾನದಂಡಗಳ ಬ್ಯೂರೋ (BIS) ಜೊತೆಗೂಡಿ ದೆಹಲಿಯ 30ಕ್ಕೂ ಹೆಚ್ಚು ಹೆಲ್ಮೆಟ್ ತಯಾರಕ ಘಟಕಗಳ ಮೇಲೆ ದಾಳಿ ನಡೆಸಿದ್ದು, ಇದರಲ್ಲಿ 9 ಪರವಾನಗಿ ರದ್ದಾದ ಹಾಗೂ ಅವಧಿ ಮುಗಿದ ಘಟಕಗಳೂ ಸೇರಿವೆ. ಇದರಿಂದಾಗಿ 2,500 ಕ್ಕೂ ಹೆಚ್ಚು ಕಳಪೆ ಹೆಲ್ಮೆಟ್ಗಳು ವಶಪಡಿಸಿಕೊಂಡಿರುವ ಮಾಹಿತಿ ಲಭ್ಯವಾಗಿದೆ.
ರಸ್ತೆ ಬದಿಗಳಲ್ಲಿನ ವ್ಯಾಪಾರಸ್ಥರು ಮತ್ತು ಅಂಗಡಿಗಳಿಂದ ಸಹ 500 ಕ್ಕೂ ಹೆಚ್ಚು ಹೆಲ್ಮೆಟ್ಗಳನ್ನು BIS ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದು, ಇವರು ನಿರ್ದಿಷ್ಟ ಗುಣಮಟ್ಟದ ಪ್ರಮಾಣಪತ್ರವಿಲ್ಲದೆ ಮಾರಾಟ ಮಾಡುತ್ತಿದ್ದಂತೆ ತಿಳಿದು ಬಂದಿದೆ. ಈ ಸಂಬಂಧವಾಗಿ ಕಾನೂನು ಕ್ರಮವೂ ಕೈಗೊಳ್ಳಲಾಗಿದೆ.
2025ರ ಜೂನ್ ವೇಳೆಗೆ ದೇಶದಲ್ಲಿ ಕೇವಲ 176 ತಯಾರಕರಿಗೆ ಮಾತ್ರ BIS ಪ್ರಮಾಣಪತ್ರ ಇದೆ ಎಂಬುದು ಹೆಚ್ಚಿನದಾಗಿ ಜನರಿಗೆ ತಿಳಿಯದ ಮಾಹಿತಿ. ಉಳಿದ ಎಲ್ಲಾ ತಯಾರಕರು ಅಥವಾ ಮಾರಾಟಗಾರರು ಕಾನೂನು ಬಾಹಿರವಾಗಿ ಕೆಲಸ ಮಾಡುತ್ತಿರುವ ಸಾಧ್ಯತೆ ಇದೆ ಎಂದು ಕೇಂದ್ರ ಇಲಾಖೆ ಶಂಕೆ ವ್ಯಕ್ತಪಡಿಸಿದೆ.ರಸ್ತೆ ಅಪಘಾತಗಳಲ್ಲಿ ಕಳಪೆ ಹೆಲ್ಮೆಟ್ಗಳಿಂದಾಗುವ ಸಾವಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ, ಇದೀಗ ಸರ್ಕಾರ ಈ ಸಂಬಂಧ ಕಟ್ಟುನಿಟ್ಟಿನ ನಿಲುವು ಹಿಡಿದಿದೆ.