ಮೊಬೈಲ್ ಫೋನ್ ಗಳು ಪ್ರಪಂಚದ ಮಾಹಿತಿ ಪಡೆಯಲು ಅಥವಾ ಯಾವುದೇ ಕೆಲಸವನ್ನು ತಕ್ಷಣ ಪೂರ್ಣಗೊಳಿಸಲು, ದೈನಂದಿನ ಅಗತ್ಯಗಳನ್ನು ಪೂರೈಸಲು ಅತ್ಯಂತ ಸಹಕಾರಿಯಾಗಿದೆ. ಇದರ ಮೂಲಕ ಇಂಟರ್ನೆಟ್ ಜೊತೆಗೆ ಅನೇಕ ಅಪ್ಲಿಕೇಶನ್ ಗಳನ್ನು ಬಳಸಿಕೊಂಡು ನಮಗೆ ಅಗತ್ಯವಿರುವ ಮಾಹಿತಿಯನ್ನು ನಾವು ಎಲ್ಲಿಯಾದರೂ, ಯಾವಾಗ ಬೇಕಾದರೂ ಪಡೆದುಕೊಳ್ಳಬಹುದಾಗಿದೆ. ಆದರೆ ಯಾವುದೇ ವ್ಯಕ್ತಿ ಅಥವಾ ವಸ್ತುವಾಗಿರಲಿ ಅವುಗಳಲ್ಲಿ ಒಳ್ಳೆಯದರ ಜೊತೆಗೆ ಕೆಟ್ಟದ್ದು ಇರುತ್ತದೆ. ಫೋನ್ ಬಳಕೆ ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಅದನ್ನು ಹೆಚ್ಚು ಬಳಸುವುದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಇಂದಿನ ಕಾಲದಲ್ಲಿ, ನಾವು ಫೋನ್ ಮೇಲೆ ಎಷ್ಟು ಅವಲಂಬಿತರಾಗಿದ್ದೇವೆ ಎಂದರೆ ಅದರ ವ್ಯಸನಿಗಳಾಗಿದ್ದೇವೆ. ಈ ರೀತಿಯ ಅಭ್ಯಾಸ ನಮಗೆ ಅನೇಕ ರೀತಿಯ, ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ನಿತ್ಯ ಬೆಲ್ಲದ ಚಹಾ ಕುಡಿಯುತ್ತಾ ಬನ್ನಿ.. ಆರೋಗ್ಯಕ್ಕೆ ಸಿಗುವ ಬೆನಿಫಿಟ್ ಎಷ್ಟು ಗೊತ್ತಾ?
ಅತಿಯಾದ ಮೊಬೈಲ್ ಫೋನ್ ಬಳಕೆಗೂ ಮೆದುಳು ಕ್ಯಾನ್ಸರ್‌ಗೂ ಯಾವುದೇ ಸಂಬಂಧ ಇಲ್ಲ ಎನ್ನುವ ಮಾಹಿತಿ ನೂತನ ಸಂಶೋಧನೆಯಿಂದ ತಿಳಿದು ಬಂದಿದೆ. ವಯರ್‌ಲೆಸ್ ತಂತ್ರಜ್ಞಾನಗಳು ಹೊರ ಸೂಸುವ ವಿಕಿರಣವು ದುರ್ಬಲವಾಗಿರುತ್ತದೆ. ಮನುಷ್ಯರ ಡಿಎನ್‌ಎಗೆ ಹಾನಿ ಮಾಡುವ ಇಲ್ಲವೇ ಕ್ಯಾನ್ಸರ್ ಕಾಯಿಲೆ ತರುವಷ್ಟು ಸಾಮರ್ಥ್ಯ ಅವಕ್ಕೆ ಇರುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಕೈಗೊಂಡ ವಿಸ್ತೃತ ಸಂಶೋಧನೆ ಈ ಕುತೂಹಲಕರ ಮಾಹಿತಿ ಹೊರಗೆಡವಿದೆ. ಸಂಶೋಧನೆಯ ನೇತೃತ್ವ ವಹಿಸಿದ್ದ ಆಸ್ಪ್ರೇಲಿಯಾದ ವಿಕಿರಣ ರಕ್ಷಣೆ ಮತ್ತು ಪರಮಾಣು ಭದ್ರತಾ ಸಂಸ್ಥೆ (ಅರ್ಪನ್ಸಾ) ಇದೇ ವಿಷಯವಾಗಿ ಸುಮಾರು 5,000ಕ್ಕೂ ಅಧಿಕ ಅಧ್ಯಯನ ವರದಿಗಳನ್ನು ಪರಿಶೀಲನೆಗೆ ಒಳಪಡಿಸಿತ್ತು.
10 ವರ್ಷಗಳಿಗೂ ಹೆಚ್ಚು ಕಾಲ ಮೊಬೈಲ್ ಫೋನುಗಳಿಗೆ ಅತ್ಯಧಿಕ ಪ್ರಮಾಣದಲ್ಲಿ ಒಡ್ಡಿಕೊಂಡರೂ ಮೆದುಳು ಕ್ಯಾನ್ಸರ್ ಬಾರದು’ ಎಂದು ಸಂಶೋಧನಾ ತಂಡದಲ್ಲಿದ್ದ ಸಂಶೋಧಕ ನ್ಯೂಜಿಲೆಂಡ್‌ನ ಮಾರ್ಕ್ ಎಲ್‌ವುಡ್ ಹೇಳುತ್ತಾರೆ. ಮೊಬೈಲ್‌ಫೋನ್ ಬಳಕೆದಾರರ ಸಂಖ್ಯೆ ಏರುಗತಿಯಲ್ಲಿ ಸಾಗಿದ್ದರೂ ಮೆದುಳು ಕ್ಯಾನ್ಸರ್ ಪೀಡಿತರ ಸಂಖ್ಯೆ ಸ್ಥಿರವಾಗಿರುವುದು ಸಂಶೋಧನೆಯ ಸಾರಾಂಶವನ್ನು ಪುಷ್ಟೀಕರಿಸಿದೆ
ಮೊಬೈಲ್ ಮತ್ತು ಇತರೆ ವಯರ್‌ಲೆಸ್ ತಂತ್ರಜ್ಞಾನಗಳು ಹೊರಸೂಸುವ ರೇಡಿಯೋ ತರಂಗಗಳ ಅಪಾಯಗಳ ಕುರಿತು ನಾನಾ ಸಿದ್ಧಾಂತಗಳು, ನಂಬುಗೆಗಳು – ಅಪನಂಬುಗೆಗಳು ಹಲವು ವರ್ಷಗಳಿಂದ ಚಾಲ್ತಿಯಲ್ಲಿವೆ. 2011ರಲ್ಲಿ ಖುದ್ದು ವಿಶ್ವ ಆರೋಗ್ಯ ಸಂಸ್ಥೆಯ ಅಂಗವಾಗಿರುವ ಅಂತಾರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ (ಐಎಆರ್‌ಸಿ), ನಿರ್ದಿಷ್ಟ ರೇಡಿಯೋ ಫ್ರೀಕ್ವೆನ್ಸಿ ಮತ್ತು ಎಲೆಕ್ಟ್ರೋಮ್ಯಾಗ್ನೆಟಿಕ್ ಫೀಲ್ಡ್ ಅನ್ನು ‘ಕ್ಯಾನ್ಸರ್‌ಕಾರಕ’ ಎಂದು ಘೋಷಿಸಿತ್ತು. ಇವೆಲ್ಲಾ ಬೆಳವಣಿಗೆಗಳಿಂದಾಗಿ ಮೊಬೈಲ್ ಫೋನ್‌ನ ಬಳಕೆಯಿಂದ ಮೆದುಳು, ಕುತ್ತಿಗೆ, ತಲೆಭಾಗದ ಕ್ಯಾನ್ಸರ್ ಬರುವುದೆಂಬ ಕಲ್ಪನೆಗಳು ಜನರಲ್ಲಿ ಬೇರೂರಿದವು. ಈ ಹಿಂದಿನ ಸಂಶೋಧನೆಗಳ ಎಚ್ಚರಿಕೆ ಕರೆಗಂಟೆಗಳಿಂದಾಗಿ ಜನರೇನೂ ಮೊಬೈಲ್ ಬಳಸುವುದನ್ನು ಕಡಿಮೆ ಮಾಡಲಿಲ್ಲ ಎನ್ನುವುದು ಅಚ್ಚರಿಯ ಸಂಗತಿ.
ಮೊಬೈಲ್ ಫೋನುಗಳು ರೇಡಿಯೊ ಫ್ರೀಕ್ವೆನ್ಸಿ (ಆರ್‌ಎಫ್) ತರಂಗಗಳ ಸಹಾಯದಿಂದ ಸಂಕೇತಗಳನ್ನು, ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುತ್ತದೆ. ಅದರಿಂದಾಗಿಯೇ ಶಕ್ತಿ ಪ್ರವಹಿಸಿ, ಎಲೆಕ್ಟ್ರೋಮ್ಯಾಗ್ನೆಟಿಕ್ ವಿಕಿರಣ ಹೊರ ಸೂಸಲ್ಪಡುತ್ತದೆ ಎನ್ನಲಾಗುತ್ತದೆ.
ನೂತನ 4ಜಿ, 5ಜಿ, ವೈಫೈ ಮತ್ತು ಬ್ಲೂಟೂತ್ ತಂತ್ರಜ್ಞಾನಗಳು ಮಾಹಿತಿ ವಿನಿಮಯಕ್ಕಾಗಿ ರೇಡಿಯೋ ತರಂಗಗಳನ್ನು ಆಧರಿಸಿದ್ದರೂ ಅದರಿಂದ ಅಂಗಾಂಶಗಳ ಉಷ್ಣಾಂಶ ಹೆಚ್ಚುವುದಾಗಲಿ, ಕೋಶಗಳು ಮತ್ತು ಡಿಎನ್‌ಎ ಡ್ಯಾಮೇಜ್ ಆಗುವುದಾಗಲಿ ಸಾಧ್ಯವಿಲ್ಲ ಎಂದು ಅಧ್ಯಯನ ಬಹಿರಂಗಪಡಿಸಿದೆ.
ಮೊಬೈಲ್ ವಿಕಿರಣದಿಂದ ಕ್ಯಾನ್ಸರ್ ಉಂಟಾಗುತ್ತದೆ ಎನ್ನುವುದಕ್ಕೆ ಸಾಕ್ಷ್ಯಗಳಿಲ್ಲ ಎನ್ನುವ ಮಾಹಿತಿ ನೂತನ ಸಂಶೋಧನೆಯಿಂದ ತಿಳಿದು ಬಂದಿದ್ದರೂ, ಮೊಬೈಲ್ ಬಳಕೆಯಿಂದ ಹಲವು ಬಗೆಯ ಅಡ್ಡ ಪರಿಣಾಮಗಳಂತೂ ಆಗಿಯೇ ಆಗುತ್ತವೆ. ಅತಿಯಾದರೆ ಅಮೃತವೂ ವಿಷ ಎನ್ನುವ ಗಾದೆ ನಮಗೆ ಹೊಸತಲ್ಲ.
ನಿದ್ರಾಹೀನತೆ
ತಲೆನೋವು
ಆತಂಕ
– ಶ್ರವಣ ಸಮಸ್ಯೆ
ದೃಷ್ಟಿದೋಷ
ದೈಹಿಕ ಚಟುವಟಿಕೆ ಕುಂಠಿತ
ಏಕಾಗ್ರತೆ ಭಂಗ
ಕೌಟುಂಬಿಕ ಸಂಬಂಧಗಳ ಮೇಲೆ ದುಷ್ಪರಿಣಾಮ