ಆನೇಕಲ್: ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಚಗಯ್ಯನದೊಡ್ಡಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ವ್ಯಕ್ತಿಯೋರ್ವನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಸುರೇಶ್ ಕೊಲೆಯಾದ ವ್ಯಕ್ತಿಯಾಗಿದ್ದು, ಕಾಂತರಾಜು ಹಾಗೂ ಆತನ ಗ್ಯಾಂಗ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್, ಶುಕ್ರವಾರ ರಾತ್ರಿ ಮದ್ಯ ಸೇವಿಸಲು ಸ್ನೇಹಿತರ ಜೊತೆ ಶ್ಯಾನುಭೋಗನಹಳ್ಳಿ ತರಂಗಿಣಿ ಬಾರ್‌ಗೆ ತೆರಳಿದ್ದ. ಅದೇ ಬಾರ್‌ನಲ್ಲಿ ಆರೋಪಿ ಕಾಂತರಾಜು ಹಾಗೂ ಆತನ ಗ್ಯಾಂಗ್ ಜೋರಾಗಿ ಮಾತನಾಡುತ್ತಾ ಮದ್ಯಸೇವನೆ ಮಾಡುತ್ತಿದ್ದರು.
ಆಗ ಅಲ್ಲೇ ಮದ್ಯ ಸೇವಿಸುತ್ತಿದ್ದ ಸುರೇಶ್, ನಿಧಾನಕ್ಕೆ ಮಾತನಾಡಿ ಎಂದು ಹೇಳಿದ್ದ. ಆಗ ಕಾಂತರಾಜು ನೀನು ಯಾರು ಕೇಳೋಕೆ ಎಂದು ಹೇಳಿದ್ದ. ಈ ವೇಳೆ ಕಾಂತರಾಜು ಮತ್ತು ಸುರೇಶ್ ನಡುವೆ ನೂಕಾಟ-ತಳ್ಳಾಟ ನಡೆದಿದೆ. ಇದಾದ ಬಳಿಕ ಸುರೇಶ್ ಮನೆಗೆ ತೆರಳಿದ್ದ. ಕಾಂತರಾಜು ಹಾಗೂ ಆತನ ಗ್ಯಾಂಗ್ ಸುರೇಶ್‌ನನ್ನು ಹಿಂಬಾಲಿಸಿಕೊಂಡು ಬಂದಿದ್ದು,
ಆತನ ಮನೆಗೆ ನುಗ್ಗಿ ಪತ್ನಿ ಮುಂದೆಯೇ ಹೊಟ್ಟೆ ಮತ್ತು ಎದೆ ಭಾಗಕ್ಕೆ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದರು. ಗಾಯಾಳು ಸುರೇಶನನ್ನು ಕೂಡಲೇ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.