ಮಂಗಳೂರು: ಮಾರಕಾಸ್ತ್ರದಿಂದ ಕೊಚ್ಚಿ ಮುಸ್ಲಿಂ ಯುವಕನನ್ನು ಬರ್ಬರವಾಗಿ ಕೊಲೆಗೈದ ಘಟನೆ ಖಂಡಿಸಿ ರಾತ್ರೋ ರಾತ್ರಿ ಮುಸ್ಲಿಂರು ಪ್ರತಿಭಟನೆ ಮಾಡಿದ್ದಾರೆ.
ಇಂದಿನಿಂದ ಮೇ. 30ರ ಸಂಜೆ 6ಗಂಟೆವರೆಗೂ ಮಂಗಳೂರು ಕಮೀಷನರೇಟ್ ಹಾಗು ಮಂಗಳೂರು ಪೊಲೀಸ್ ವ್ಯಾಪ್ತಿಯಡಿ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದ್ದು ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದೆ.
ಮಂಗಳವಾರ ನಡೆದಿತ್ತು ಭೀಕರ ಕೊಲೆ:-
ಮಂಗಳವಾರ ಮಧ್ಯಾಹ್ನ 3.30ರ ಸುಮಾರಿಗೆ ಬಂಟ್ವಾಳದ ಕೂರಿಯಾಳ ಸಮೀಪದ ಇರಾಕೋಡಿ ಎಂಬಲ್ಲಿ ಮುಸ್ಲಿಂ ಯುವಕನ ಬರ್ಬರ ಹತ್ಯೆ ನಡೆದಿತ್ತು. ಅಬ್ದುಲ್ ರಹಿಮಾನ್ ಯಾನೆ ರಹೀಂ(34) ಅವರನ್ನು ಬರ್ಬರವಾಗಿ ಕೊಲೆಯಾದ ಯುವಕ. ಪಿಕಪ್ ವಾಹನ ಹೊಂದಿರೋ ಅಬ್ದುಲ್ ರಹೀಂ ಬಳಿ ಒಂದು ಲೋಡ್ ಮರಳು ಬೇಕೆಂದು ದುಷ್ಕರ್ಮಿಗಳು ಕುರಿಯಾಳದ ಇರಾಕೋಡಿಗೆ ಕರೆಸಿಕೊಂಡಿದ್ದಾರೆ. ಮರಳು ಇಳಿಸಿದ ಕೆಲವೇ ಕ್ಷಣದಲ್ಲಿ ಅಲ್ಲೇ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಬ್ದುಲ್ ರಹೀಂ ಅವರನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರೂ ಆ ವೇಳೆ ಮೃತಪಟ್ಟಿದ್ದಾರೆ. ರಹೀಂ ಜೊತೆಗಿದ್ದ ಕಲಂಧರ್ ಶಾಫಿ ಎಂಬವರಿಗೂ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದು ಗಂಭೀರ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.