ಕೋಲಾರ – ಮುಳಬಾಗಿಲು ನಗರ ಹಾಗೂ ಕೋಲಾರ ಗ್ರಾಮಾಂತರ ಸೇರಿದಂತೆ ಒಂಬತ್ತು ಕಡೆ ವಿವಿಧ ಸಂದರ್ಭಗಳಲ್ಲಿ ಕನ್ನ ಹಾಕಿ ಚಿನ್ನ ಹಾಗೂ ಬೆಳ್ಳಿ ಕದ್ದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಬನಶಂಕರಿ ಬಳಿಯ ಇಲಿಯಾಸ್ ನಗರದ ನಿವಾಸಿ ಸೈಯದ್ ಅಫ್ಸರ್ (37) ಬಂಧಿತ ಆರೋಪಿ. ಬಂಧಿತನಿಂದ 557 ಗ್ರಾಂ ಚಿನ್ನ, ಎರಡೂವರೆ ಕೆ.ಜಿ ಬೆಳ್ಳಿ ಸೇರಿದಂತೆ ಸುಮಾರು ₹ 52.63 ಲಕ್ಷ ಮೌಲ್ಯದ ಆಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುಳಬಾಗಿಲು ನಗರದ ಮಂಜುನಾಥ್ ಕಾಲೋನಿಯ ಸೋಮಶೇಖರಪ್ಪ ಎಂಬುವರ ನಿವಾಸದಲ್ಲಿ ಏ.4ರಂದು ಕಳ್ಳತನ ನಡೆದಿತ್ತು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಬಾಗಿಲು ಮುರಿದು ಚಿನ್ನ ಕದ್ದಿರುವ ಬಗ್ಗೆ ಮುಳಬಾಗಿಲು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರ ವಿಶೇಷ ತಂಡ ರಚಿಸಿ ತನಿಖೆ ಕೈಗೊಳ್ಳಲಾಗಿತ್ತು. ಆರೋಪಿ ಸೈಯದ್ ಅಫ್ಸರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಿಷಯ ಗೊತ್ತಾಗಿದೆ. ‘ಕಳ್ಳತನ ಮಾಡಿರುವ ಬಗ್ಗೆ ಆರೋಪಿ ಅಫ್ಸರ್ ಒಪ್ಪಿಕೊಂಡಿದ್ದಾನೆ. ಹೆಚ್ಚಿನ ವಿಚಾರಣೆ ನಡೆಸಿದಾಗ ಮುಳಬಾಗಿಲು ನಗರದಲ್ಲಿ ಏಳು ಕಡೆ, ನಂಗಲಿಯಲ್ಲಿ ಒಂದು ಕಡೆ ಹಾಗೂ ಕೋಲಾರ ಗ್ರಾಮಾಂತರದಲ್ಲಿ ಒಂದು ಕಡೆ ಸೇರಿ ಒಟ್ಟು 9 ಕಡೆ ಮನೆ ಕಳ್ಳತನ ಮಾಡಿರುವುದಾಗಿ ಹೇಳಿದ್ದಾನೆ. ಎಲ್ಲಾ ಪ್ರಕರಣಗಳಲ್ಲಿ ಕಳ್ಳತನವಾಗಿ ಚಿನ್ನ ಹಾಗೂ ಬೆಳ್ಳಿಯನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.