ನವದೆಹಲಿ:- ಅಹಮದಾಬಾದ್ ವಿಮಾನ ದುರಂತ ಪ್ರಕರಣದಲ್ಲಿ ಮೃತಪಟ್ಟ ಕುಟುಂಬಗಳಿಗೆ 1 ಕೋಟಿ ಪರಿಹಾರವನ್ನು ಟಾಟಾ ಗ್ರೂಪ್ ಘೋಷಿಸಿದೆ. ಕಂಪನಿಯ ಅಧ್ಯಕ್ಷ ಎನ್ ಚಂದ್ರಶೇಖರನ್ ಈ ಘೋಷಣೆ ಮಾಡಿದ್ದಾರೆ.
ಗಾಯಾಳುಗಳ ವೈದ್ಯಕೀಯ ವೆಚ್ಚವನ್ನು ಟಾಟಾ ಗ್ರೂಪ್ ಭರಿಸಲಿದೆ ಮತ್ತು ಅವರಿಗೆ ಅಗತ್ಯವಿರುವ ಎಲ್ಲಾ ಆರೈಕೆ ಮತ್ತು ಬೆಂಬಲ ದೊರೆಯುವಂತೆ ನೋಡಿಕೊಳ್ಳಲಿದೆ ಎಂದು ಅವರು ಹೇಳಿದರು. ವಿಮಾನ ಪತನಗೊಂಡು ಬಿದ್ದ ಬಿ ಜೆ ಮೆಡಿಕಲ್ಸ್ ಹಾಸ್ಟೆಲ್ ನಿರ್ಮಾಣಕ್ಕೆ ನಾವು ಸಹಾಯ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಈ ಕ್ಷಣದಲ್ಲಿ ನಾವು ಅನುಭವಿಸುತ್ತಿರುವ ದುಃಖವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬ ಮತ್ತು ಗಾಯಗೊಂಡವರ ಜೊತೆ ನಾವಿದ್ದೇವೆ ಎಂದು ಹೇಳಿದರು.
ಏನಿದು ಘಟನೆ?
ಟೇಕಾಫ್ ನಂತರ ಎಂಜಿನ್‌ನಲ್ಲಿ ತಾಂತ್ರಿಕದೋಷ ಉಂಟಾದ ಪರಿಣಾಮ 242 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್‌ನ ವಿಮಾನ ನಿಲ್ದಾಣದ ಬಳಿಯ ಬಿಜೆ ಮೆಡಿಕಲ್ ಕಾಲೇಜಿನ ಮೇಲೆ ಪತನಗೊಂಡಿದೆ. ವಿಮಾನ ನಿಲ್ದಾಣದಿಂದ ಕೇವಲ 2 ಕಿ.ಮೀ ದೂರದ ಮೇಘಾನಿ ಪ್ರದೇಶದಲ್ಲಿ ವಿಮಾನ ಪತನಗೊಂಡಿದ್ದು, ಆಕಾಶದಲ್ಲಿ ದಟ್ಟ ಹೊಗೆ ಆವರಿಸಿದೆ.
ಅಲ್ಲದೇ ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್‌ಗೆ ವಿಮಾನ ಬಡಿದ್ದಿದ್ದು, ಭಾರೀ ಸಾವು-ನೋವಿನ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ 7 ಅಗ್ನಿಶಾಮಕ ಹಾಗೂ ಎನ್‌ಡಿಆರ್‌ಎಫ್ ತಂಡದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈವರೆಗೂ 133 ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.