ಬೆಂಗಳೂರು: ಆಲಮಟ್ಟಿ ಅಣೆಕಟ್ಟು ಎತ್ತರವನ್ನು 524 ಮೀಟರ್ ಗಳಿಗೆ ಹೆಚ್ಚಿಸಿ, ನಮ್ಮ ಪಾಲಿನ ನೀರು ಬಳಸಿಕೊಳ್ಳಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
“2010ರಲ್ಲಿ ಕೃಷ್ಣಾ ಜಲ ನ್ಯಾಯಾಧಿಕರಣ ತೀರ್ಪಿನ ಅನ್ವಯ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಬೇಕಾಗಿದೆ. ಈ ಸಂಬಂಧ ಮೇ 7ರಂದು ಕೇಂದ್ರ ಜಲಶಕ್ತಿ ಸಚಿವಾಲಯವು ನಾಲ್ಕು ರಾಜ್ಯ ಸರಕಾರದ ಪ್ರತಿನಿಧಿಗಳ ಸಭೆ ಕರೆದಿದೆ. ಈ ವಿಚಾರವಾಗಿ ಸಂಬಂಧಪಟ್ಟ ಸಚಿವರನ್ನು ಕರೆಸಿ ಸಭೆ ಮಾಡಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ವಿಚಾರವಾಗಿ ಕಾನೂನು ತಜ್ಞರ ಜತೆ ಚರ್ಚೆ ಮಾಡಿದ್ದು, 2 ದಿನಗಳಲ್ಲಿ ಅವರು ತಮ್ಮ ಅಭಿಪ್ರಾಯ ನೀಡಲಿದ್ದಾರೆ. ಇವುಗಳ ಆಧಾರದ ಮೇಲೆ ಕೇಂದ್ರ ಸಚಿವಾಲಯದ ಸಭೆಯಲ್ಲಿ ನಾವು ನಮ್ಮ ಬೇಡಿಕೆ ಪ್ರಸ್ತಾಪಿಸುತ್ತೇವೆ” ಎಂದು ತಿಳಿಸಿದರು.
“ಈ ಯೋಜನೆ ಜಾರಿಗೆ ಸರ್ಕಾರ ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದ್ದು, ಇದಕ್ಕೆ ಅಗತ್ಯ ಹಣ ಮೀಸಲಿಡಲಾಗುವುದು” ಎಂದರು.
ಸ್ಪೋರ್ಟ್ಸ್ ಕಾಂಪ್ಲೆಕ್ಸ್ʼಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭೇಟಿ: ಬೆಲ್ಲದ ಸಾಥ್
ಆಂಧ್ರ ಹಾಗೂ ತೆಲಂಗಾಣಕ್ಕೆ 13 ಟಿಎಂಸಿ ನೀರು ಲಾಭವಾಗಲಿದೆ ಎಂದು ಕೇಳಿದಾಗ, “ಅವರಿಗೆ ಎಷ್ಟಾದರೂ ಲಾಭ ಆಗಲಿ, ನಷ್ಟ ಆಗಲಿ. ನಾವು ಅಣೆಕಟ್ಟನ್ನು 524 ಮೀಟರ್ ಗಳಿಗೆ ಎತ್ತರಿಸಬೇಕು. ಅದಕ್ಕೆ ಎಷ್ಟು ಬೇಕೋ ಅಷ್ಟು ಪ್ರಯತ್ನ ನಾವು ಮಾಡುತ್ತೇವೆ” ಎಂದು ತಿಳಿಸಿದರು.
ಟನಲ್ ರಸ್ತೆ, ಮೆಟ್ರೋಗೆ ಅಗತ್ಯವಿರುವ ಜಾಗ ಪಡೆಯುತ್ತೇವೆ
ಟನಲ್ ರಸ್ತೆ ಹಾಗೂ ಮೆಟ್ರೋ ಕಾಮಗಾರಿಗೆ ಹೆಬ್ಬಾಳ ಬಳಿಯ ಜಾಗದ ವಿಚಾರವಾಗಿ ನಡೆದ ಸಭೆಯ ಬಗ್ಗೆ ಕೇಳಿದಾಗ, “ಹೆಬ್ಬಾಳ ಜಂಕ್ಷನ್ ಬಹಳ ಮುಖ್ಯವಾದ ಜಾಗ. ಇಲ್ಲಿ ಮೆಟ್ರೋ ಹಾಗೂ ಟನಲ್ ರಸ್ತೆ ಅವಶ್ಯವಿದೆ. ಹೀಗಾಗಿ ನಾವು ಅಗತ್ಯವಿರುವ ಜಾಗವನ್ನು ತೆಗೆದುಕೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ನಾವು ಯೋಜನೆ ಹಿಂಪಡೆಯಲು ಸಾಧ್ಯವಿಲ್ಲ. ಮೆಟ್ರೋ ಹಾಗೂ ಟನಲ್ ರಸ್ತೆ ಅಧಿಕಾರಿಗಳು ಸೇರಿ ಇದರ ವಿನ್ಯಾಸ ಸಿದ್ಧಪಡಿಸುವಂತೆ ಸೂಚಿಸಿದ್ದೇವೆ. ಇದಕ್ಕೆ ಅಗತ್ಯವಿರುವ ಮಿಲಿಟರಿ ಜಾಗ ಹಾಗೂ ಖಾಸಗಿ ಜಾಗ ಎಷ್ಟು ಬೇಕು ಎಂದು ನಾವು ಚರ್ಚೆ ಮಾಡಿದ್ದೇವೆ. ಟಿಡಿಆರ್ ಅಥವಾ ಎಫ್ ಎ ಆರ್ ಮೂಲಕ ಪರಿಹಾರ ನೀಡಲು ನಾವು ಬದ್ಧವಾಗಿದ್ದೇವೆ. ನಾವು ಈ ಜಾಗ ಬಿಟ್ಟು ಕೊಡಲು ಸಿದ್ದವಿಲ್ಲ. ಟನಲ್ ನಿರ್ಮಾಣಕ್ಕೆ ಟೆಂಡರ್ ಕರೆಯಬೇಕಾಗಿದ್ದು, ಇದಕ್ಕೆ ಅಗತ್ಯವಿರುವ ಜಾಗದ ವಿಚಾರವಾಗಿ ನಾವು ಸಭೆ ಮಾಡಿದ್ದೇವೆ” ಎಂದರು.