ಬೆಂಗಳೂರು:- ವಾಹನ ಸವಾರರು ನೋಡಲೇಬೇಕಾದ ಸ್ಟೋರಿ. ನಗರದಾದ್ಯಂತ ಮೇಲ್ಸೇತುವೆಗಳಲ್ಲಿ ರಾತ್ರಿ 11 ರಿಂದ ಬೆಳಿಗ್ಗೆ 6 ವರೆಗೆ ಸಂಚಾರ ನಿಷೇಧಿಸಿದ್ದಾರೆ. ಕೆಆರ್ ಮಾರುಕಟ್ಟೆ, ಶಾಂತಿನಗರ ಡಬಲ್ ರೋಡ್ ಫ್ಲೈಓವರ್ ಸೇರಿದಂತೆ ನಗರದ ಎಲ್ಲ ಪ್ರಮುಖ ಮೇಲ್ಸೇತುವೆಗಳಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ಸಂಚಾರಕ್ಕೆ ತಡೆಯೊಡ್ಡುವ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ.
ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಪುಂಡರು ವ್ಹೀಲಿಂಗ್ ನಡೆಸಿದ ವಿಡಿಯೋ ಇತ್ತೀಚೆಗೆ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಖುದ್ದು ಗೃಹ ಸಚಿವ ಪರಮೇಶ್ವರ್ ಅವರೇ ಆ ಬಗ್ಗೆ ಪ್ರತಿಕ್ರಿಯಿಸಿ, ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ವಾರಾಂತ್ಯ ಹಾಗೂ ಮೂರು ರಜೆ ಒಟ್ಟಿಗೆ ಬಂದಿರುವುದರಿಂದ ಶುಕ್ರವಾರ ವಿವಿಧ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಸಾಧ್ಯತೆ ಇದೆ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ. ಸಂಭಾವ್ಯ ಸಂಚಾರ ದಟ್ಟಣೆ ಪ್ರದೇಶಗಳ ಬಗ್ಗೆ ಎಕ್ಸ್ ಮೂಲಕ ಮಾಹಿತಿ ನೀಡಿದ್ದು, ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವಂತೆ ಮನವಿ ಮಾಡಿದ್ದಾರೆ.
ಯುಗಾದಿ ಮತ್ತು ರಂಜಾನ್ ಹಬ್ಬವಿರುವುದರಿಂದ ಹಾಗೂ ವಾರಾಂತ್ಯವಿರುವುದರಿಂದ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ ಹೆಚ್ಚಿನ ವಾಹನಗಳಲ್ಲಿ ಸಾರ್ವಜನಿಕರು ಹೋಗುವುದರಿಂದ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದ್ದು ಸಾರ್ವಜನಿಕ ಸಹಕರಿಸಲು ಕೋರಿದೆ ಎಂದು ಎಕ್ಸ್ ಸಂದೇಶದಲ್ಲಿ ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಯುವಕರ ವ್ಹೀಲಿಂಗ್‌ನಿಂದ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿರುವುದರಿಂದ, ರಾತ್ರಿ 11 ರಿಂದ ಬೆಳಗ್ಗೆ 6 ರವರೆಗೆ ಎಲ್ಲಾ ಮೇಲ್ಸೇತುವೆಗಳಲ್ಲಿ ಸಂಚಾರ ನಿಷೇಧಿಸಲಾಗಿದೆ. ಮತ್ತೊಂದೆಡೆ, ಪಬ್ಲಿಕ್ ಐ ಅಪ್ಲಿಕೇಶನ್ ಬದಲಿಗೆ ಅಸ್ತ್ರಂ ಅಪ್ಲಿಕೇಶನ್ ಬಳಸಿ ಟ್ರಾಫಿಕ್ ನಿಯಮ ಉಲ್ಲಂಘನೆ ವರದಿ ಮಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.