ಹುಬ್ಬಳ್ಳಿ,: ಶಾಲಾ ಶಿಕ್ಷಣವನ್ನು ಪೂರೈಸಿದ ನಂತರ ಉನ್ನತ ಶಿಕ್ಷಣ ಪಡೆಯಲು ಬಯಸುವ ಹೆಣ್ಣುಮಕ್ಕಳಿಗೆ ನೆರವಾಗುವ ಉದ್ದೇಶದಿಂದ ಅಜೀಂ ಪ್ರೇಮ್‌ಜಿ ಫೌಂಡೇಷನ್ ಇಂದು ಅಜೀಂ ಪ್ರೇಮ್‌ಜಿ ವಿದ್ಯಾರ್ಥಿವೇತನವನ್ನು ಘೋಷಿಸಿದೆ. ಅಜೀಂ ಪ್ರೇಮ್‌ಜಿ ವಿದ್ಯಾರ್ಥಿವೇತನದ ಮುಖ್ಯ ವಿವರಗಳು:
• ಅರ್ಹತೆ:
a) ಮುನಿಸಿಪಲ್ ಶಾಲೆಗಳನ್ನು ಒಳಗೊಂಡಂತೆ ಸರ್ಕಾರಿ (ಸಾರ್ವಜನಿಕ) ಶಾಲೆಗಳಲ್ಲಿ ತಮ್ಮ 10 ಮತ್ತು 12ನೇ ತರಗತಿ ಶಿಕ್ಷಣವನ್ನು ಪೂರೈಸಿರುವ ಹೆಣ್ಣುಮಕ್ಕಳು.
b) ಪದವಿ ಅಥವಾ ಡಿಪ್ಲೊಮ ಕೋರ್ಸ್ ಮಾಡಲು ಮಾನ್ಯತೆ ಪಡೆದ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ದಾಖಲಾತಿ ಪಡೆದವರು. ಮಾನ್ಯತೆ ಪಡೆದ ಉನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಎಲ್ಲ ಸರ್ಕಾರಿ (ಸಾರ್ವಜನಿಕ) ಹಾಗೂ ಕೆಲವು ಖಾಸಗಿ ಸಂಸ್ಥೆಗಳು ಸೇರಿರುತ್ತವೆ.
• ವಿದ್ಯಾರ್ಥಿವೇತನ:
o ಹೆಣ್ಣುಮಗುವು ಪದವಿ/ಡಿಪ್ಲೊಮ ಕೋರ್ಸ್ ಮುಗಿಸುವವರೆಗೆ ಯಶಸ್ವಿಯಾಗಿ ಓದಿನಲ್ಲಿ ಮುಂದುವರೆಯುತ್ತಿದ್ದಲ್ಲಿ, ಪ್ರತಿ ವರ್ಷ ₹30,000 ನೀಡಲಾಗುವುದು.
o ಉದಾಹರಣೆಗೆ, ನಾಲ್ಕು ವರ್ಷದ ಬಿ.ಎಸ್ಸಿ ನರ್ಸಿಂಗ್ ಓದುವ ಹೆಣ್ಣುಮಗಳಿಗೆ ನಾಲ್ಕು ವರ್ಷಗಳಲ್ಲಿ ಒಟ್ಟು ₹1,20,000 ವಿದ್ಯಾರ್ಥಿವೇತನ ದೊರೆಯುತ್ತದೆ.
o ಈ ಹಣವನ್ನು ಪ್ರತಿ ವರ್ಷ ಎರಡು ಕಂತುಗಳಲ್ಲಿ ಹೆಣ್ಣುಮಕ್ಕಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು. ಅವರು ಈ ಹಣವನ್ನು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳಬಹುದು.2025-26 ನೇ ಶೈಕ್ಷಣಿಕ ವರ್ಷದಲ್ಲಿ 2.5 ಲಕ್ಷ ಹೆಣ್ಣುಮಕ್ಕಳಿಗೆ ಅಜೀಂ ಪ್ರೇಮ್‌ಜಿ ವಿದ್ಯಾರ್ಥಿವೇತನವನ್ನು ನೀಡಲಾಗುವುದು ಎಂದು ಫೌಂಡೇಷನ್ ಅಂದಾಜಿಸಿದೆ. ಈ ಕಾರ್ಯಕ್ರಮವು ದೇಶದ 18 ರಾಜ್ಯಗಳಲ್ಲಿ ಲಭ್ಯವಿರುತ್ತದೆ.
“ಉತ್ತಮ ಶಾಲಾ ಶಿಕ್ಷಣವು ಜೀವನದ ಅಡಿಪಾಯವಾದರೆ, ಉನ್ನತ ಶಿಕ್ಷಣವು ಜೀವನದ ಸಾಮಾಜಿಕ ಮತ್ತು ಆರ್ಥಿಕ ನಿರೀಕ್ಷೆಗಳನ್ನು ಬದಲಾಯಿಸುತ್ತದೆ. ಭಾರತವು ವಿವಿಧ ರಂಗಗಳಲ್ಲಿ ಸರ್ವತೋಮುಖ ಪ್ರಗತಿಯನ್ನು ಸಾಧಿಸಿದ್ದರೂ, ಹೆಣ್ಣುಮಕ್ಕಳು ಎಲ್ಲ ಶೈಕ್ಷಣಿಕ ಹಂತಗಳಲ್ಲೂ ಸಾಮಾಜಿಕ ಮತ್ತು ಆರ್ಥಿಕ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೆಣ್ಣುಮಕ್ಕಳು ತಮ್ಮ ಜೀವನದ ಹಾದಿಯಲ್ಲಿ ಸ್ವ-ನಿಯಂತ್ರಣ ಸಾಧಿಸಲು ನೆರವಾಗುವಂತಹ ಉನ್ನತ ಶಿಕ್ಷಣವನ್ನು ಪಡೆಯುವಂತಾಗಲು ನಾವು ಗಣನೀಯ ಬೆಂಬಲ ನೀಡಲು ಮುಂದಾಗುತ್ತಿದ್ದೇವೆ” ಎಂದು ಅಜೀಂ ಪ್ರೇಮ್ ಜಿ ಫೌಂಡೇಷನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನುರಾಗ್ ಬೆಹರ್ ಹೇಳಿದ್ದಾರೆ.
2024-25ರ ಶೈಕ್ಷಣಿಕ ವರ್ಷದಲ್ಲಿ ಇಡೀ ಮಧ್ಯಪ್ರದೇಶ, ಹಾಗೂ ಉತ್ತರಪ್ರದೇಶ, ರಾಜಸ್ಥಾನ ಮತ್ತು ಜಾರ್ಖಂಡ್‌ನ ಕೆಲವು ಜಿಲ್ಲೆಗಳಲ್ಲಿ ಅಜೀಂ ಪ್ರೇಮ್‌ಜಿ ವಿದ್ಯಾರ್ಥಿವೇತನವನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಾಯಿತು. 25000ಕ್ಕಿಂತ ಹೆಚ್ಚು ಹೆಣ್ಣುಮಕ್ಕಳಿಗೆ ಈ ಪ್ರಾಯೋಗಿಕ ಹಂತದಲ್ಲಿ ವಿದ್ಯಾರ್ಥಿವೇತನವನ್ನು ನೀಡಲಾಗಿದೆ. ಮೊದಲನೇ ವರ್ಷದ ವಿದ್ಯಾರ್ಥಿವೇತನದ ಹಣವನ್ನು ಈ ಹೆಣ್ಣುಮಕ್ಕಳ ಖಾತೆಗಳಿಗೆ ವರ್ಗಾಯಿಸಲಾಗಿದೆ.
2025–26ನೇ ಸಾಲಿನ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಸೆಪ್ಟೆಂಬರ್ 2025ರಲ್ಲಿ ಪ್ರಾರಂಭವಾಗಲಿದೆ. ಹದಿನೆಂಟು ರಾಜ್ಯಗಳ ಪಟ್ಟಿ ಈ ರೀತಿ ಇದೆ: ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಮಣಿಪುರ್, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ, ರಾಜಸ್ಥಾನ, ಸಿಕ್ಕಿಂ, ತೆಲಂಗಾಣ, ತ್ರಿಪುರಾ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ.
ಕಾರ್ಯಕ್ರಮದ ವಿವರಗಳು ಹಾಗೂ ಅದರ ವಿನ್ಯಾಸ ಅಥವಾ ವ್ಯಾಪ್ತಿಯಲ್ಲಿ ಯಾವುದೇ ಬದಲಾವಣೆಗಳಿದ್ದರೆ, ಅವುಗಳನ್ನು ಅರ್ಜಿ ಪ್ರಕ್ರಿಯೆ ಆರಂಭವಾಗುವ ವೇಳೆಗೆ ತಿಳಿಸಲಾಗುತ್ತದೆ. ಮುಂಬರುವ ವರ್ಷಗಳಲ್ಲಿ ಈ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ದೇಶವ್ಯಾಪಿ ವಿಸ್ತರಿಸುವ ಸಾಧ್ಯತೆ ಇದೆ.