ಭಾರತೀಯ ಚಿತ್ರರಂಗದ ಐಕಾನಿಕ್ ಸಿನಿಮಾಗಳಲ್ಲಿ ಒಂದು ಬಾಹುಬಲಿ ಸಿನಿಮಾ. ಎರಡು ಭಾಗದಲ್ಲಿ ಬಿಡುಗಡೆಯಾಗಿದ್ದ ಮಹಾಕಾವ್ಯ ದೃಶ್ಯಕ್ಕೆ ಪ್ರೇಕ್ಷಕರ ಫಿದಾ ಆಗಿದ್ದರು. ನಿರ್ದೇಶಕ ರಾಜಮೌಳಿ ಬಾಹುಬಲಿ ದ ಬಿಗಿನಿಂಗ್ಸ್ ಆ ನಂತರ ಬಾಹುಬಲಿ 2 ದ ಕನ್ಕ್ಲೂಷನ್ ಎಂಬ ಶೀರ್ಷಿಕೆಯಡಿ ಪ್ರೀಕ್ವೆಲ್ ಹಾಗೂ ಸೀಕ್ವೆಲ್ ಚಿತ್ರ ಮಾಡಿದ್ದರು. ಇಡೀ ಭಾರತೀಯ ಸಿನಿ ಇಂಡಸ್ಟ್ರಿಯಲ್ಲೇ ಈ ಸರಣಿ ಸಿನಿಮಾಗಳು ಹಲವಾರು ಹೊಸ ದಾಖಲೆಗಳನ್ನು ನಿರ್ಮಿಸುವುದರೊಂದಿಗೆ ಸಾಕಷ್ಟು ಹಳೇ ರೆಕಾರ್ಡ್ಗಳನ್ನು ಧೂಳೀಪಟ ಮಾಡಿತ್ತು. ಇದೇ ದಿನ 2017ರಲ್ಲಿ ಬಾಹುಬಲಿ 2 ಚಿತ್ರ ಬಿಡುಗಡೆಯಾಗಿತ್ತು. ಇಂದಿಗೆ ಈ ಸಿನಿಮಾಗೆ 8 ವರ್ಷದ ಸಂಭ್ರಮ.
ಇದೇ ಏಪ್ರಿಲ್ 28 ರಂದು ಬಾಹುಬಲಿ ಎರಡನೇ ಅಧ್ಯಾಯ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಡಾರ್ಲಿಂಗ್ ಪ್ರಭಾಸ್ ಡಬಲ್ ರೋಲ್ ನಲ್ಲಿ ಧಮಾಕ ಸೃಷ್ಟಿಸಿದ್ದರು. ಅಮರೇಂದ್ರ ಬಾಹುಬಲಿ ಹಾಗೂ ಮಹೇಂದ್ರ ಬಾಹುಬಲಿ ಎಂಬ ಎರಡು ಪಾತ್ರಗಳಲ್ಲಿ ಅಮೋಘವಾಗಿ ನಟಿಸುವ ಮೂಲಕ ಚಿತ್ರಪ್ರೇಮಿಗಳಿಂದ ಸೈ ಎನಿಸಿಕೊಂಡಿದ್ದರು. ಬಾಹುಬಲಿ ಸರಣಿ ಸಿನಿಮಾಗಾಗಿ ಪ್ರಭಾಸ್ ತೂಕ ಹೆಚ್ಚಿಸಿಕೊಂಡು ಹೊಸ ರೂಪದಲ್ಲಿ ಕಾಣಿಸಿಕೊಂಡಿದ್ದರು.
ದ್ವಿಪಾತ್ರಗಳಲ್ಲಿ ನಟಿಸಿದ್ದ ಪ್ರಭಾಸ್, ಅಮರೇಂದ್ರ ಬಾಹುಬಲಿಗಾಗಿ 120 ಕೆಜಿ ತೂಕ ಹೆಚ್ಚಿಸಿಕೊಂಡಿದ್ದರಂತೆ. ಅದಕ್ಕಾಗಿ ನಿರ್ಮಾಪಕರು ಅವರಿಗೆ 1 ಕೋಟಿಗೂ ಅಧಿಕ ಜಿಮ್ ಉಪಕರಣ ನೀಡಿ ಖ್ಯಾತ ಬಾಡಿಬಿಲ್ಡರ್ ಲಕ್ಷ್ಮಣ್ ರೆಡ್ಡಿ ಅವರ ಅಡಿಯಲ್ಲಿ ತರಬೇತಿ ಕೊಡಿಸಿದ್ದರಂತೆ. ಎರಡನೇ ಭಾಗದಲ್ಲಿ ಬಂದ ಮಹೇಂದ್ರ ಬಾಹುಬಲಿ ಪಾತ್ರಕ್ಕೆ ಸಾಕಷ್ಟು ಸಣ್ಣಗಾಗಿದ್ದರು ಪ್ರಭಾಸ್.
ಬಾಹುಬಲಿ ಸರಣಿಗಾಗಿ ಪ್ರಭಾಸ್ ಐದು ವರ್ಷಗಳನ್ನು ಮೀಸಲಿಟ್ಟಿದ್ದರು. ಬಾಹುಬಲಿ ಮೊದಲ ಭಾಗದ ಚಿತ್ರೀಕರಣ ಆರಂಭಿಸಿದ ನಂತರ, ಅವರು ಐದು ವರ್ಷಗಳ ಕಾಲ ಮತ್ಯಾವ ಚಿತ್ರಕ್ಕೂ ಸಹಿ ಹಾಕಿರಲಿಲ್ಲ. ಉಳಿದ ಪ್ರಮುಖ ತಾರಾಗಳದಲ್ಲಿದ್ದ ರಾಣಾ ದಗ್ಗುಬಾಟಿ, ತಮನ್ನಾ ಭಾಟಿಯಾ ಮತ್ತು ಅನುಷ್ಕಾ ಶೆಟ್ಟಿ ಸೇರಿದಂತೆ ಹಲವರು ಬಾಹುಬಲಿ ನಂತರ ನಾನಾ ಸಿನಿಮಾಗಳಲ್ಲಿ ನಟಿಸಿದರು. ಆದರೆ ಪ್ರಭಾಸ್ ಮಾತ್ರ ಸಿನಿಮಾ ಸಂಪೂರ್ಣವಾಗಿ ಮುಗಿದು, ರಿಲೀಸ್ ಆಗುವ ತನಕ ಯಾವ ಚಿತ್ರವನ್ನು ಕೈಗೆತ್ತಿ ಕೊಂಡಿಲಿಲ್ಲ.
ಬಾಹುಬಲಿ ಸಿನಿಮಾ ಬಾಕ್ಸಾಫೀಸ್ನಲ್ಲಿ ಐತಿಹಾಸಿಕ ದಾಖಲೆ ಬರೆಯಿತು. ಏಳು ವರ್ಷಗಳ ಹಿಂದೆಯೇ, ಹಾಕಿದ ಬಜೆಟ್ಗಿಂತ ಮೂರು ಪಟ್ಟು ಹೆಚ್ಚಿನ ಲಾಭವನ್ನು ಗಳಿಸಿಕೊಂಡಿತು. ಈ ಚಿತ್ರಕ್ಕೆ ಹಾಕಿರುವ ಬಜೆಟ್ 180 ಕೋಟಿ ರೂ. ಆದರೆ ಬಂದಿದ್ದು 600 ರಿಂದ 650 ಕೋಟಿ ರೂ. ಎಂದು ಅಧಿಕೃತವಾಗಿ ವರದಿಯಗಿದೆ. ಹೀಗೆ ಮೂರು ಪಟ್ಟು ಹೆಚ್ಚಿನ ಲಾಭಗಳಿಸಿ, ಬಾಕ್ಸಾಫಸ್ನಲ್ಲಿ ಹೊಸ ಇತಿಹಾಸ ಬರೆಯಿತು. ಮೂರು ಪಟ್ಟು ಲಾಭದಾಯಕವಾದ ಕಲೆಕ್ಷನ್ ಗಳಿಸಿಕೊಂಡ ಹೆಗ್ಗಳಿಕೆಗೂ ಅಂದು ಪಾತ್ರವಾಗಿತ್ತು.