ಕೆಲವರಿಗೆ ಬಾಯಿ ದುರ್ಗಂಧ ಬರುವ ಸಮಸ್ಯೆ ಇರುತ್ತದೆ. ಇದರಿಂದ ಮತ್ತೊಬ್ಬರ ಬಳಿ ಮಾತನಾಡಲು ಕೂಡ ಹಿಂಜರಿಯುತ್ತಾರೆ. ಅಷ್ಟೇ ಅಲ್ಲ ಬಾಯಿ ದುರ್ವಾಸನೆ ಬರುತ್ತಿದ್ದವರೊಂದಿಗೆ ಸಮೀಪದಲ್ಲಿ ನಿಂತು ಮಾತನಾಡಲು ಇತರರಿಗೂ ಹಿಂಸೆ ಆಗುತ್ತದೆ.
ನಮ್ಮ ಬಾಯಿ ವಾಸನೆ ಬರುತ್ತಿರುವ ಬಗ್ಗೆ ನಮಗೆ ಹೆಚ್ಚಾಗಿ ತಿಳಿದಿಲ್ಲದಿರಬಹುದು. ಆದರೆ, ನಮ್ಮ ಸುತ್ತಮುತ್ತಲಿರುವವರಿಗೆ ನಮ್ಮಿಂದ ಕಷ್ಟವಾಗುತ್ತಿರುತ್ತದೆ. ಇದನ್ನು ಹೇಳಲು ಅವರು ಪರದಾಡುತ್ತಿರುತ್ತಾರೆ. ಕೆಲವೊಂದು ಬಾರಿ ನೇರವಾಗಿ ಹೇಳಿಬಿಡುತ್ತಾರೆ. ಇದರಿಂದ ನಮಗೆ ಮುಜುಗರವಾಗುತ್ತದೆ.
ಲವಂಗ ಅಗಿಯಿರಿ: ಲವಂಗವು ಒಂದು ಮಸಾಲೆ ಪದಾರ್ಥವಾಗಿದ್ದು, ಇದನ್ನು ಅಡುಗೆ ಮಾತ್ರವಲ್ಲದೆ ಮನೆಮದ್ದುಗಳಲ್ಲೂ ಬಳಸಲಾಗುತ್ತದೆ. ಬ್ಯಾಕ್ಟೀರಿಯಾ ವಿರೋದಿ ಗುಣಗಳನ್ನು ಹೊಂದಿರುವ ಲವಂಗವನ್ನು ಜಗಿಯುವ ಮೂಲಕ ಬಾಯಿ ದುರ್ವಾಸನೆಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಸೋಂಪು ಜಗಿಯಿರಿ: ಸೋಂಪು ಕೂಡಾ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು ಸಹಾಯಕವಾಗಿದೆ. ಪ್ರತಿದಿನ ನೀವು ಊಟದ ಬಳಿಕ ಸ್ವಲ್ಪ ಸೋಂಪು ಕಾಳುಗಳನ್ನು ಜಗಿಯುವುದರಿಂದ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುವುದರ ಜೊತೆಗೆ ಹೊಟ್ಟೆ ಸಂಬಂಧಿ ಸಮಸ್ಯೆಗಳಿಂದ ದೂರವಿರಬಹುದು.
ಪುದೀನಾ:ಬಾಯಿಯ ದುರ್ವಾಸನೆಯನ್ನು ತೊಡೆದುಹಾಕಲು, ನೀವು ಪುದೀನಾ ಎಲೆಗಳನ್ನು ಸಹ ಅಗಿಯಬಹುದು. ಇದು ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ ಮತ್ತು ನಿಮಗೆ ತಾಜಾತನದ ಅನುಭವವನ್ನು ನೀಡುತ್ತದೆ.
ಏಲಕ್ಕಿ: ಬಾಯಿಯಿಂದ ಬರುವ ದುರ್ವಾಸನೆಯನ್ನು ತೊಡೆದು ಹಾಕಲು ಏಲಕ್ಕಿಯನ್ನು ಸಹ ಜಗಿಯಬಹುದು. ನೀವು ಊಟದ ನಂತರ ಸೋಂಪು ಕಾಳುಗಳನ್ನು ತಿನ್ನುವಂತೆ ಏಲಕ್ಕಿಯನ್ನು ಸಹ ಜಗಿಯಬಹುದು. ಇದೊಂದು ನೈಸರ್ಗಿಕ ಮೌತ್ ಫ್ರೆಶ್ನರ್ ಅಂತಾನೇ ಹೇಳಬಹುದು.
ಇದಲ್ಲದೆ ಒಂದು ಲೋಟ ನೀರಿಗೆ ಶುಂಠಿ ರಸ ಬೆರೆಸಿ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಹೀಗೆ ಮೂರು ಬಾರಿ ಬಾಯಿ ಮುಕ್ಕಳಿಸುವುದರಿಂದ ಬಾಯಿ ದುರ್ವಾಸನೆ ನಿವಾರಣೆಯಾಗುತ್ತದೆ. ಅದೇ ರೀತಿ, ನಿಂಬೆ ರಸವನ್ನು ಸಹ ಬಳಸಿ ಬಾಯಿ ಮುಕ್ಕಳಿಸುವುದರಿಂದಲೂ ಬಾಯಿಯ ದುರ್ವಾಸನೆಯನ್ನು ತೊಡೆದು ಹಾಕಬಹುದು.