ಇಂದು ಕಾಯಕಯೋಗಿ, ಭಕ್ತಿ ಭಂಡಾರಿ, ಜಗಜ್ಯೋತಿ ಬಸವಣ್ಣನವರ ಜಯಂತಿ. ಎಲ್ಲರೂ ಭಕ್ತಿ ಭಾವದಿಂದ ‘ಕ್ರಾಂತಿ ಯೋಗಿ ಬಸವಣ್ಣʼ ಅವರನ್ನು ಸ್ಮರಿಸುತ್ತಿದ್ದಾರೆ. ಈ ಜಯಂತಿ ವಿಶೇಷವಾಗಿ ಕನ್ನಡ ಸಿನಿಮಾ ಜಗತ್ತಿನಲ್ಲಿ ಬಸವಣ್ಣನಾಗಿ ಮಿಂಚಿದವರು ನಟರು ಯಾರು ಅನ್ನೋದನ್ನು ನೋಡುವುದಾದರೇ ಬಸವಣ್ಣನವರ ಬದುಕನ್ನು ಆಧರಿಸಿದ ಮೊದಲ ಸಿನಿಮಾ ಜಗಜ್ಯೋತಿ ಬಸವೇಶ್ವರ.
ಹೊನ್ನಪ್ಪ ಭಾಗವತರ್, ಬಸವಣ್ಣನ ಪಾತ್ರ ನಿರ್ವಹಿಸಿದ್ದರು. ವರನಟ ಡಾ.ರಾಜ್‌ಕುಮಾರ್ ಬಿಜ್ಜಳನ ಪಾತ್ರ ನಿರ್ವಹಿಸಿದ್ದು. ಟಿ.ವಿ.ಸಿಂಗ್‌ಠಾಕೂರ್ ಜಗಜ್ಯೋತಿ ಬಸವೇಶ್ವರ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾ ರಾಷ್ಟ್ರ ಪ್ರಶಸ್ತಿ ಕೂಡ ಬಂದಿತ್ತು.
ಬಸವಣ್ಣ ಪಾತ್ರಗಳಿಗೆ ಹೇಳಿಮಾಡಿಸಿದಂತಿದ್ದವರು ಅಶೋಕ್ ಅವರು. 1983ರಲ್ಲಿ ತೆರೆಕಂಡ ಕ್ರಾಂತಿಯೋಗಿ ಬಸವಣ್ಣ ಸಿನಿಮಾದಲ್ಲಿ ಬಸವಣ್ಣನ ಪಾತ್ರವನ್ನು ಅಶೋಕ್ ಮಾಡಿದ್ದರು. ಹನ್ನೆರಡನೇ ಶತಮಾನದ ಅನೇಕ ಕ್ರಾಂತಿಕಾರಿ ವಿಚಾರಗಳು ಸಿನಿಮಾದಲ್ಲಿವೆ. ಕೆ.ಎಸ್.ಎಲ್. ಸ್ವಾಮಿ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.
ದಾನಮ್ಮದೇವಿ ಚಿತ್ರದಲ್ಲಿ ನಟ ರಾಮಕೃಷ್ಣ ನಿಭಾಯಿಸಿದ್ದ ಬಸವೇಶ್ವರರ ಪಾತ್ರ ಮೆಚ್ಚುಗೆಗೆ ಪಾತ್ರವಾಗಿತ್ತು. ಹಂಸಲೇಖ ಸಾಹಿತ್ಯ, ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿದ್ದ ದಾನಮ್ಮ ದೇವಿ ಸಿನಿಮಾದ ಹಾಡುಗಳು ಸಖತ್ ಹಿಟ್ ಆಗಿದ್ದವು. ಈ ಚಿತ್ರಕ್ಕೆ ಚಿಂದೋಡಿ ಬಂಗಾರೇಶ್ ಆಕ್ಷನ್ ಕಟ್ ಹೇಳಿದ್ದರು.
ಅಲ್ಲಮ ಸಿನಿಮಾದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಬಸವೇಶ್ವರರ ಪಾತ್ರ ಮಾಡಿದ್ದರು. ಅನುಭವ ಮಂಟದಲ್ಲಿ ಅಲ್ಲಮರೊಂದಿಗೆ ಮುಖಾಮುಖಿಯಾಗುವ ಪಾತ್ರದಲ್ಲಿ ಸಂಚಾರಿ ವಿಜಯ್ ಗಮನ ಸೆಳೆದಿದ್ದರು. ಟಿ.ಎಸ್.ನಾಗಾಭರಣ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಚಿತ್ರದಲ್ಲಿ ಡಾಲಿ ಧನಂಜಯ್ ಅಲ್ಲಮನಾಗಿ ನಟಿಸಿದ್ದರು.
ಕನ್ನಡ ಸಿನಿಮಾ ಕಂಡ ಪ್ರತಿಭಾವಂತ ಕಲಾವಿದ ಶ್ರೀನಿವಾಸಮೂರ್ತಿ ಕಿರುತೆರೆಗಾಗಿ `ಕ್ರಾಂತಿಯೋಗಿ ಬಸವಣ್ಣ ಧಾರಾವಾಹಿ ನಿರ್ದೇಶಿಸಿ, ಶೀರ್ಷಿಕೆ ಪಾತ್ರಕ್ಕೆ ಜೀವ ತುಂಬಿದ್ದರು. ಒಂದೂವರೆ ದಶಕದ ಹಿಂದೆ ಖಾಸಗಿ ವಾಹಿನಿಯೊಂದರಲ್ಲಿ ಪ್ರತಿವಾರ ಎರಡು ವರ್ಷಗಳ ಕಾಲ ಈ ಸೀರಿಯಲ್ ಪ್ರಸಾರವಾಗಿತ್ತು.
ನಟ ರಮೇಶ್ ಅರವಿಂದ್. ಬಿಎ ಪುರುಷೋತ್ತಮ್ ನಿರ್ದೇಶನದ ಮಹಾಶಿವಶರಣ ಹರಳಯ್ಯ ಸಿನಿಮಾದಲ್ಲಿ ರಮೇಶ್ ಅರವಿಂದ್ ಬಸವಣ್ಣನ ಪಾತ್ರದಲ್ಲಿ ಮಿಂಚಿದರು. ನಟ ಶ್ರೀಧರ್ ,ಕೆ.ವಿ.ರವಿಚಂದ್ರ ಸೇರಿದಂತೆ ಪ್ರಮುಖ ಪಾತ್ರಗಳಲ್ಲಿ ಗಮನ ಸೆಳೆದಿದ್ದರು.
ಇನ್ನು ಶಿವಶರಣ, ಶರಣೆಯರಾದ ದಾನಮ್ಮದೇವಿ, ಮಡಿವಾಳ ಮಾಚಿದೇವ, ಹರಳಯ್ಯನವರ ಸಿನಿಮಾಗಳಲ್ಲಿಯೂ ಬಸವೇಶ್ವರರ ಪಾತ್ರಗಳು ಗಮನ ಸೆಳೆದಿದ್ದವು.ಒಟ್ಟಾರೆ ಕನ್ನಡ ಬೆಳ್ಳಿತೆರೆಯಲ್ಲಿ ಬಸವೇಶ್ವರರ ಪಾತ್ರದಲ್ಲಿ ಸಾಕಷ್ಟು ತಾರೆಯರು ಅಭಿನಯಿಸಿ ಸೈ ಎನ್ನಿಸಿಕೊಂಡಿರೋದು ವಿಶೇಷ.